Headlines

ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಕೋಟ್ಯಂತರ ರೂ ಲೂಟಿ – Kannada News | PWD Department Corruption: Fraudster Allegedly Posed as Satish Jarkiholi’s Relative to Loot Crores

ರಾಯಚೂರು, ಜೂನ್​​ 28: ಇತ್ತೀಚೆಗೆ ಇಡಿ ದಾಳಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಬಾಮೈದ ಮಂಜುನಾಥ್ ಲಂಚಾವಾತಾರ (corruption) ಅನಾವರಣವಾಗಿತ್ತು. ಬರೋಬ್ಬರಿ 13 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿತ್ತು. ಇದೀಗ ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಓರ್ವ ವ್ಯಕ್ತಿ ಬರೋಬ್ಬರಿ 3.48 ಕೋಟಿ ರೂ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ಆ ಮೂಲಕ ಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ.

3 ಕೋಟಿ 48 ಲಕ್ಷ ರೂ ಹಣ ಗುಳುಂ

ರಾಯಚೂರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವೆಂಕಟೇಶ್ ಗಲಗ ವಿರುದ್ಧ ಇದೀಗ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಮಸ್ಕಿಯಿಂದ ಲಿಂಗಸುಗೂರು ರಸ್ತೆ ಕಾಮಗಾರಿಯಲ್ಲಿ ನಯಾಪೈಸೆಯಷ್ಟು ಕೆಲಸ ಮಾಡದಿದ್ದರೂ, ನಕಲಿ ದಾಖಲೆಗಳು ಸೃಷ್ಟಿಸುವ ಮೂಲಕ ಕಾಮಗಾರಿ ಆಗಿದೆ ಎಂದು ಬರೋಬ್ಬರಿ 3 ಕೋಟಿ 48 ಲಕ್ಷ ರೂ ಹಣ ಗುಳುಂ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಇಡಿ ದಾಳಿ ಮಾಡಿದ ವೈ ಮಂಜುನಾಥ ಯಾರು? ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಡಿಟೇಲ್ಸ್ ಇಲ್ಲಿದೆ

ಇನ್ನು ಈ ರಸ್ತೆ ಕಾಮಗಾರಿಯ ಅಧಿಕೃತ ಟೆಂಡರ್ ‘ಅಮ್ಮಾಪುರ ಆ್ಯಂಡ್​ ಕಂಪನಿ’ ಹೆಸರಿಗೆ ಮಂಜೂರಾಗಿತ್ತು. ಆದರೆ, ಇದೇ ಕಾಮಗಾರಿಯ ಮಧ್ಯೆ ‘ಭೀಮಾಶಂಕರ ದೋರನಹಳ್ಳಿ’ ಎಂಬ ಹೆಸರಿನಲ್ಲಿ ಮತ್ತೊಂದು ನಕಲಿ ಟೆಂಡರ್ ಹಾಗೂ ನಕಲಿ ವರ್ಕ್ ಡನ್ ದಾಖಲೆಗಳನ್ನು ಸೃಷ್ಟಿಸಿ ಈ ಬೃಹತ್ ವಂಚನೆ ಎಸಗಲಾಗಿದೆ ಎನ್ನಲಾಗುತ್ತಿದೆ. ಈ ಬ್ರಹ್ಮಾಂಡ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಪಾಲರು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದೆ.

ಆರೋಪ ತಳ್ಳಿಹಾಕಿದ ಇಇ ವೆಂಕಟೇಶ ಗಲಗ

ಆರೋಪ ಕುರಿತಾಗಿ ಪ್ರತಿಕ್ರಿಯೆ ನೀಡಿರುವ PWD ಇಇ ವೆಂಕಟೇಶ ಗಲಗ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ‘ಈ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಬೇರೊಂದು ಇಲಾಖೆಯಿಂದ ಫೈಲ್ ಅಪ್ರೂವ್ ಆಗಿ ಬಂದ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ನೀಡಲಾಗಿತ್ತು. ಆದರೆ, ನಮ್ಮ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಹಣ ಆ ಆರೋಪಿತರಿಗೆ ಸಂದಾಯವಾಗಿಲ್ಲ. ಈ ಇಡೀ ಪ್ರಕರಣದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.


ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *