Headlines

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಸಮವಸ್ತ್ರವೇ ಹೊರೆ: ಬಟ್ಟೆಗಿಂತ ಹೊಲಿಗೆ ಕೂಲಿಯೇ ದುಪ್ಪಟ್ಟು! – Kannada News | Bengaluru Government School Parents Outraged as Uniform Stitching Charges Cost More Than Ready Made Clothes

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ (Karnataka) ಈಗಾಗಲೇ ಶಾಲೆಗಳು ಶುರುವಾಗಿವೆ. ಆದರೆ, ಇತ್ತ ಶಾಲಾ ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಉಚಿತ ಸಮವಸ್ತ್ರ ನೀಡುವ ವಿಷಯದಲ್ಲಿ ಪೋಷಕರನ್ನು ಸಂಕಷ್ಟಕ್ಕೆ ತಳ್ಳಿದೆ. ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಗಳ ಪೋಷಕರು ‘ನಮಗೆ ಸರ್ಕಾರದ ಉಚಿತ ಸಮವಸ್ತ್ರದ ಬಟ್ಟೆಯೇ ಬೇಡ, ನಾವೇ ಸ್ವಂತ ಹಣದಲ್ಲಿ ಖರೀದಿ ಮಾಡುತ್ತೇವೆ’ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಶಿಕ್ಷಣ ಇಲಾಖೆ ನೀಡುವ ಉಚಿತ ಬಟ್ಟೆಗಿಂತ ಅದರ ಹೊಲಿಗೆ ಕೂಲಿಯೇ ದುಪ್ಪಟ್ಟಾಗಿರುವುದು. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಟ್ಟೆಗಿಂತ ಹೊಲಿಗೆ ಕೂಲಿಯೇ ಎರಡು ಪಟ್ಟು ಹೆಚ್ಚು!

ಸರ್ಕಾರಿ ಶಾಲಾ ಮಕ್ಕಳಿಗೆ 2026-27ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಈಗಾಗಲೇ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಉಚಿತವಾಗಿ ನೀಡಿದೆ. ಆದರೆ, ಬಟ್ಟೆಯ ಹೊಲಿಗೆ ವೆಚ್ಚವನ್ನು ಮಕ್ಕಳ ಪೋಷಕರೇ ಭರಿಸಬೇಕು ಎಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಒಂದು ಜೊತೆ ಶರ್ಟ್ ಹಾಗೂ ಪ್ಯಾಂಟ್ ಅಥವಾ ಚಡ್ಡಿ ಹೊಲಿಸಲು ಕನಿಷ್ಠ 1,300 ರಿಂದ 1,500 ರೂಪಾಯಿಗೂ ಅಧಿಕ ಹಣವನ್ನು ದರ್ಜಿಗಳು (Tailors) ಕೇಳುತ್ತಿದ್ದಾರೆ. ಈ ಭಾರಿ ಮೊತ್ತದ ಹೊಲಿಗೆ ವೆಚ್ಚವನ್ನು ಬಡ ಪೋಷಕರು ಭರಿಸಬೇಕಾಗಿ ಬಂದಿರುವುದರಿಂದ ಅವರು ಪರದಾಡುವಂತಾಗಿದೆ. ಕಳೆದ ಎರಡು ವರ್ಷಗಳಿಂದ ಶಿಕ್ಷಣ ಇಲಾಖೆ ಕೇವಲ ಬಟ್ಟೆಯನ್ನು ನೀಡುತ್ತಿದ್ದು, ಹೊಲಿಗೆ ಕೂಲಿ ಗಗನಕ್ಕೇರಿದೆ. ‘ಇಷ್ಟು ಹೊಲಿಗೆ ಕೂಲಿ ಕೊಡುವ ಹಣದಲ್ಲಿ ಮಾರುಕಟ್ಟೆಯಲ್ಲಿ ಎರಡು ಜೊತೆ ಸಿದ್ಧ (Ready-made) ಸಮವಸ್ತ್ರಗಳೇ ಸಿಗುತ್ತವೆ. ಹೀಗಾಗಿ ಸರ್ಕಾರ ಬಟ್ಟೆ ಕೊಡುವುದನ್ನು ನಿಲ್ಲಿಸಿ, ಸಿದ್ಧಪಡಿಸಿದ ಸಮವಸ್ತ್ರವನ್ನೇ ನೀಡಲಿ ಇಲ್ಲವಾದರೆ ಬೇಡವೇ ಬೇಡ’ ಎಂದು ಪೋಷಕರು ಶಿಕ್ಷಕರ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಣ್ಣ ಬಣ್ಣದ ಬಟ್ಟೆಗಳ ಗೋಳಾಟ

ಸದ್ಯ ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಲೈಟ್ ಬ್ಲೂ ಮೇಲಂಗಿ (ಶರ್ಟ್) ಮತ್ತು ನೇವಿ ಬ್ಲೂ ನಿಕ್ಕರ್ ಬಟ್ಟೆ ನೀಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಹಳದಿ ಬಣ್ಣ ಮಿಶ್ರಿತ ಚಕ್ಸ್ ಇರುವ ಚೂಡಿದಾರ್ ಟಾಪ್, ಹಸಿರು ಬಾಟಮ್ ಹಾಗೂ ದುಪ್ಪಟ್ಟಾ ಮತ್ತು ನೇವಿ ಬ್ಲೂ ಸ್ಕರ್ಟ್ ಬಟ್ಟೆಗಳನ್ನು ವಿತರಿಸಲಾಗುತ್ತಿದೆ. ಈ ಬಟ್ಟೆಗಳನ್ನು ಹೊಲಿಸಿಕೊಳ್ಳಲು ಹಣವಿಲ್ಲದೆ, ಪೋಷಕರು ಹಿಂದೇಟು ಹಾಕುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಹೊಸ ಬಟ್ಟೆ ಸಿಕ್ಕಿದ್ದರೂ ಹಳೆಯ ಸಮವಸ್ತ್ರ ಧರಿಸಿಕೊಂಡೇ ಶಾಲೆಗೆ ಬರುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಶಾಲೆಗಳು! ಸರ್ಕಾರಿ ಶಾಲೆಗಳ ದುಸ್ಥಿತಿ ಕೇಳೋರಿಲ್ಲ

ಮತ್ತೊಂದು ವಿಚಿತ್ರವೆಂದರೆ, ಇಲಾಖೆಯು 7ನೇ ತರಗತಿಯ ಗಂಡು ಮಕ್ಕಳಿಗೆ ಚಡ್ಡಿಯ ಸಮವಸ್ತ್ರ ನೀಡುತ್ತಿದೆ. ಆದರೆ, ಈ ವಯಸ್ಸಿನ ವಿದ್ಯಾರ್ಥಿಗಳು ಚಡ್ಡಿ ಧರಿಸಲು ನಿರಾಕರಿಸುತ್ತಿದ್ದು, ಪ್ಯಾಂಟ್ ಧರಿಸುತ್ತಿದ್ದಾರೆ. ಹೀಗಾಗಿ ಪೋಷಕರು ಸರ್ಕಾರದ ಬಟ್ಟೆಯನ್ನು ಕೈಬಿಟ್ಟು ಸ್ವಂತ ಹಣದಲ್ಲಿ ಪ್ಯಾಂಟ್ ಖರೀದಿಸಿ ಕೊಡುತ್ತಿದ್ದಾರೆ.

ಅಧಿಕಾರಿಗಳ ಮತ್ತು ಆಯೋಗದ ಭರವಸೆ

ಈ ಗಂಭೀರ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಸಂತೋಷ್ ಕುಮಾರ್, ಶಾಲಾ ವಿದ್ಯಾರ್ಥಿಗಳ ಮತ್ತು ಪೋಷಕರ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲೇ ಸರಿಪಡಿಸುವ ಭರವಸೆ ನೀಡಿದ್ದಾರೆ. ಇತ್ತ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಹ ಪೋಷಕರ ಅಸಮಾಧಾನ ಹಾಗೂ ಹೊಲಿಗೆ ವೆಚ್ಚದ ಹೊರೆಯ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *