ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಪ್ರದೀಪ್ ಈಶ್ವರ್Image Credit source: Siddaramaiah X Account
ಬೆಂಗಳೂರು, ಜೂನ್ 30: ತಮ್ಮ ಮೇಲೆ ಚಪ್ಪಲಿ ಎಸೆತ ಪ್ರಕರಣ ಸಂಬಂಧ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್ ಈಶ್ವರ್ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂಬವನ್ನು ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಈಶ್ವರ್ ಭಾವುಕರಾಗಿದ್ದಾರೆ. ಈ ವೇಳೆ ಪ್ರದೀಪ್ ಈಶ್ವರ್‌ಗೆ ಸಿದ್ದರಾಮಯ್ಯ ಧೈರ್ಯ ತುಂಬಿದ್ದು, ರಾಜಕಾರಣದಲ್ಲಿ ಇಂಥ ಘಟನೆ ಸಾಮಾನ್ಯ. ಇಂಥವನ್ನು ಎದುರಿಸಬೇಕು, ಇದರಿಂದ ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.
ಗೃಹ ಸಚಿವರ ಜೊತೆ ಸಿದ್ದರಾಮಯ್ಯ ಚರ್ಚೆ
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ನನ್ನನ್ನು ಭೇಟಿಮಾಡಿ, ಕೆಂಪೇಗೌಡ ಜಯಂತಿ ಆಚರಣೆಯ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಮೇಲೆ ಚಪ್ಪಲಿ ಎಸೆದು, ತಮ್ಮ ಕುಟುಂಬದವರನ್ನು ನಿಂದಿಸಿದ್ದು ಸೇರಿದಂತೆ ಅಂದು ನಡೆದ ಎಲ್ಲಾ ಘಟನೆಯನ್ನು ವಿವರಿಸಿ, ತಮ್ಮ ನೋವನ್ನು ಹಂಚಿಕೊಂಡರು.
ರಾಜಕಾರಣದಲ್ಲಿ ಇಂಥಹ ಘಟನೆಗಳು… pic.twitter.com/Z6dLFr2FBk
— Siddaramaiah (@siddaramaiah) June 30, 2026
ಬಳಿಕ ಘಟನೆ ಸಂಬಂಧ ಗೃಹ ಸಚಿವರ ಜೊತೆಗೂ ದೂರವಾಣಿ ಮೂಲಕ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪ್ರಿಯಾಂಕ್ ಖರ್ಗೆಗೆ ಮಾಜಿ ಸಿಎಂ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಅದರಲ್ಲೂ ಆಡಳಿತ ಪಕ್ಷದ ಶಾಸಕರಿಗೆ ಈ ರೀತಿ ಆಗಿರುವುದರ ಬಗ್ಗೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ; ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ನಾಲ್ವರ ಬಂಧನ
ಪ್ರದೀಪ್ ಬೆಂಬಲಿಸಿ ಸಿಎಂ ಡಿಕೆಶಿ ಪೋಸ್ಟ್
“ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ!”
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ ಹಾಗೂ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗದೆ, ತರ್ಕದ ವೇದಿಕೆಯಿಂದ ತರಗೆಲೆ ರಾಜಕಾರಣಕ್ಕೆ ಇಳಿದಿರುವುದು ನಿಮ್ಮ ಬೌದ್ಧಿಕ…
— DK Shivakumar (@DKShivakumar) June 28, 2026
ಮತ್ತೊಂದೆಡೆ ಎಕ್ಸ್ ಮೂಲಕ ಶಾಸಕ ಪ್ರದೀಪ್ ಈಶ್ವರ್ ಪರ ಸಿಎಂ ಡಿಕೆ ಶಿವಕುಮಾರ್ ಕೂಡ ಪೋಸ್ಟ್ ಮಾಡಿದ್ದು, ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಮೇಲೆ ಚಪ್ಪಲಿ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ, ಮಾತುಗಳನ್ನ ಜೀರ್ಣಿಸಿಕೊಳ್ಳಲಾಗದೆ ತರ್ಕದ ವೇದಿಕೆಯಿಂದ ತರಗೆಲೆ ರಾಜಕಾರಣಕ್ಕೆ ಇಳಿದಿರುವುದು ನಿಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದ ಆಶಯಗಳನ್ನು ಬೀದಿಗೆ ತಂದು ಹರಾಜಿಗಿಟ್ಟಿರುವ ನೀವು ನಿಮ್ಮ ಕಾರ್ಯಕರ್ತರಿಗೆ ಕಲಿಸುತ್ತಿರುವ ಸಂಸ್ಕಾರವಾದರೂ ಇಂತಹುದೇನಾ? ನೆನಪಿರಲಿ, ಇಂತಹ ಹಿಂಸಾತ್ಮಕ ದಾಳಿಗಳು ನಮ್ಮ ನಾಯಕರ ಹೋರಾಟದ ಹಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆಯೇ ಹೊರತು ಎಂದಿಗೂ ಧೃತಿಗೆಡಿಸುವುದಿಲ್ಲ. ಇದು ಬಸವಣ್ಣನವರ, ಕುವೆಂಪು ಅವರ ಶಾಂತಿಪ್ರಿಯ ಕರ್ನಾಟಕ. ಇಲ್ಲಿ ಇಂತಹ ವಿಕೃತ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ. ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬರ ವಿರುದ್ಧವೂ ನಾವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:57 pm, Tue, 30 June 26