ಬೆಂಗಳೂರು, (ಜುಲೈ 01): ಕರ್ನಾಟಕ (Karnataka) ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಸಮರ ಮುಗಿದೆ. ಇದೀಗ ಬಿಜೆಪಿ (BJP) ಪಾಳಯದಲ್ಲೂ ಬಣ ಬಡಿದಾಟಗಳು ನಡೆಯುತ್ತಿವೆ. ಸಂಸದ ಡಾ ಕೆ ಸುಧಾಕರ್ ಹಾಗೂ ಎಸ್ಆರ್ ವಿಶ್ವನಾಥ್ ಸೇರಿದಂತೆ ಇತರೆ ಕೆಲ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದರ ನಡುವೆ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಹಗ್ಗ ಜಗ್ಗಾಟ ನಡೆಯುತ್ತಿದೆ. ಹೌದು…ಬಿವೈ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಕೂಗೂ ನಿನ್ನೆ ಮೊನ್ನೇಯದ್ದಲ್ಲ. ಆರಂಭದಲ್ಲಿಂದಲೂ ಸಹ ವಿರೋಧಿ ಬಣ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದೆ. ಆದ್ರೆ, ಹೈಕಮಾಂಡ್ ಯಾವುದೇ ತೀರ್ಮಾನಕ್ಕೆ ಬರುತ್ತಿಲ್ಲ. ಆದರೂ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಗಳಾಗಲಿವ ಎನ್ನುವ ಸುದ್ದಿ ಮತ್ತೆ ಮುನ್ನಲೆಗೆ ಬಂದಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ ಸೋಮಣ್ಣ ಅವರ ಹೆಸರು ಹೇಳಿ ಬರುತ್ತಿದೆ. ಇನ್ನು ಈ ಬಗ್ಗೆ ಮಾಧ್ಯಮಗಳು ಕೇಳಿದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಸಂದೇಶಕ್ಕೆ ಬದ್ಧ ಎಂದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ಸಂದೇಶಕ್ಕೆ ಬದ್ಧ. ಅಮಿತ್ ಶಾ ವರುಣದಲ್ಲಿ ಸ್ಪರ್ಧಿಸು ಎಂದಿದ್ದಕ್ಕೆ ಅಲ್ಲಿ ಸ್ಪರ್ಧಿಸಿದ್ದೆ. ತುಮಕೂರಿನಲ್ಲಿ ಸ್ಪರ್ಧೆ ಮಾಡು ಎಂದರು, ಅಲ್ಲಿ ಸ್ಪರ್ಧಿಸಿ ಗೆದ್ದೆ. ಹೈಕಮಾಂಡ್ ಏನು ಹೇಳುತ್ತದೋ ಅದನ್ನು ನಾನು ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಜವಾಬ್ದಾರಿ ಹೊತ್ತುಕೊಳ್ಳಲು ರೆಡಿ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.