Headlines

ಸೋಲಿನ ಬೆನ್ನಲ್ಲೇ ಅಪ್ಪಳಿಸಿದ ತಂದೆಯ ನಿಧನದ ಸುದ್ದಿ..! – Kannada News | DR Congo coach left shocked by news of father’s death

ಫಿಫಾ ವಿಶ್ವಕಪ್ 2026ರ ನಾಕೌಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ಹೊರಬಿದ್ದಿದೆ. ಈ ಸೋಲಿನ ಬೆನ್ನಲ್ಲೇ ಡಿಆರ್​ ಕಾಂಗೋ ತಂಡದ ಮುಖ್ಯ ಕೋಚ್ ಸೆಬಾಸ್ಟಿಯನ್ ಡೆಸಾಬ್ರೆ ಅವರಿಗೆ ಮತ್ತೊಂದು ಆಘಾತ ಎದುರಾಗಿತ್ತು. ಅದು ಸಹ ತಂದೆಯ ನಿಧನದ ಸುದ್ದಿಯೊಂದಿಗೆ!

ಅಟ್ಲಾಂಟಾದ ಮರ್ಸಿಡಿಸ್-ಬೆಂಜ್ ಸ್ಟೇಡಿಯಂನಲ್ಲಿ ನಡೆದ ರೌಂಡ್ ಆಫ್ 32 ಹಂತದ ಪಂದ್ಯ ಮುಗಿಸಿ ಡಿಆರ್​ ಕಾಂಗೋ ತಂಡದ ಮುಖ್ಯ ಕೋಚ್ ಸೆಬಾಸ್ಟಿಯನ್ ಡೆಸಾಬ್ರೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಕಾಂಗೋ ತಂಡದ ಮಾಧ್ಯಮ ಅಧಿಕಾರಿಯೊಬ್ಬರು ಡೆಸಾಬ್ರೆ ಅವರಿಗೆ ತಂದೆಯ ನಿಧನದ ಸುದ್ದಿ ತಿಳಿಸಿದ್ದಾರೆ.

ಆಘಾತಕಾರಿ ಪ್ರಕಟಣೆ:

ಇಂಗ್ಲೆಂಡ್ ವಿರುದ್ಧದ ಪಂದ್ಯ ಮುಗಿದ ನಂತರ ಕೋಚ್ ಡೆಸಾಬ್ರೆ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗೋ ತಂಡದ ಸಂವಹನ ಅಧಿಕಾರಿ ಮಾಧ್ಯಮಗೋಷ್ಠಿಯನ್ನು ಕೊನೆಗೊಳಿಸಲು ನಿರ್ಧರಿಸಿದರು.

ಅಲ್ಲದೆ ಫ್ರೆಂಚ್ ಭಾಷೆಯಲ್ಲಿ, “ಧನ್ಯವಾದಗಳು… ನಮ್ಮ ಕೋಚ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ನಾವು ಪ್ರಕಟಿಸುತ್ತಿದ್ದೇವೆ. ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಹೇಳಿದರು.

ಈ ಮಾತನ್ನು ಕೇಳುತ್ತಿದ್ದಂತೆ ಡೆಸಾಬ್ರೆ ಅವರು ಸಂಪೂರ್ಣವಾಗಿ ಸ್ತಬ್ದರಾದರು. ತೀವ್ರ ನೋವು ಮತ್ತು ನಂಬಲಾಗದ ಭಾವನೆಯಿಂದ ಮಾಧ್ಯಮ ಅಧಿಕಾರಿಯನ್ನು ದಿಟ್ಟಿಸಿದ ಅವರು, “ಮರ್ಸಿ” (ಧನ್ಯವಾದಗಳು) ಎಂದು ಹೇಳಿ ತಕ್ಷಣವೇ ಪತ್ರಿಕಾಗೋಷ್ಠಿಯಿಂದ ಹೊರನಡೆದರು.

ಸಾರ್ವಜನಿಕರ ಆಕ್ರೋಶ:

ಈ ಆಘಾತಕಾರಿ ಸುದ್ದಿಯನ್ನು ಕೋಚ್ ಅವರ ಅನುಮತಿಯಿಲ್ಲದೆ, ಲೈವ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಜಗತ್ತಿನ ಮುಂದೆ ಅನೌನ್ಸ್ ಮಾಡಿದ ಮಾಧ್ಯಮ ಅಧಿಕಾರಿಯ ನಡೆಗೆ ಕ್ರೀಡಾಲೋಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಾಕೌಟ್ ಪಂದ್ಯದಲ್ಲಿ ಸೋತ ಕಾಂಗೋ:

ಇಂಗ್ಲೆಂಡ್​ ವಿರುದ್ಧದ ಈ ಪಂದ್ಯದ  7ನೇ ನಿಮಿಷದಲ್ಲೇ ಬ್ರಿಯಾನ್ ಸಿಪೆಂಗಾ ಗಳಿಸಿದ ಗೋಲಿನಿಂದ ಕಾಂಗೋ 1-0 ಮುನ್ನಡೆ ಸಾಧಿಸಿ ಇಂಗ್ಲೆಂಡ್‌ಗೆ ಮೊದಲಾರ್ಧದಲ್ಲೇ ಶಾಕ್ ನೀಡಿತ್ತು.

ಆದರೆ 75ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಸಮಬಲದ ಗೋಲು ಬಾರಿಸಿದರು. ಬಳಿಕ 86ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಇಂಗ್ಲೆಂಡ್‌ಗೆ 2-1 ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರಿ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದೆ. ಇತ್ತ ಕಾಂಗೋ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯ ‘ಆರಾ’ ಕಂಡು ಸ್ಟಾರ್ ಕ್ರಿಕೆಟಿಗರೇ ದಂಗು..!

ಈ ಸೋಲಿನ ಹೊರತಾಗಿಯೂ ಕಾಂಗೋ ತಂಡವು ನಾಕೌಟ್ ಹಂತಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಯೊಂದಿಗೆ ಮುಂಬರುವ ವಿಶ್ವಕಪ್​ನಲ್ಲಿ ಪುಟಿದೇಳುವ ವಿಶ್ವಾಸದೊಂದಿಗೆ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ.

Source link

Leave a Reply

Your email address will not be published. Required fields are marked *