ಕರ್ನಾಟಕ ಹೈಕೋರ್ಟ್Image Credit source: Getty Images
ಬೆಂಗಳೂರು, ಜುಲೈ 02: 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಯು.ಟಿ. ಖಾದರ್ ಶಿಫಾರಸು ಮೇರೆಗೆ ಕೆಲ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಕಲಬುರಗಿ ಜಿಲ್ಲೆಯ ಲಾಡ್ಲೆ ಮಶಾಕ್ ದರ್ಗಾ ಗಲಭೆ ಕೇಸ್, ಕೋಮುಗಲಭೆ ಕೇಸ್ಗಳೂ ಸೇರಿ 52 ಪ್ರಕರಣ ವಾಪಸಾತಿಗೆ ನಿರ್ಧರಿಸಲಾಗಿತ್ತು. ಆದರೆ 2026 ಮೇ 27ರ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಕೋಮುಗಲಭೆ ಆರೋಪಿಗಳ ಪರ ಯು.ಟಿ.ಖಾದರ್ ಶಿಫಾರಸು ಆರೋಪ ಸಂಬಂಧ ಯು.ಟಿ.ಖಾದರ್ಗೆ ನೋಟಿಸ್ ನೀಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದ್ದು, ಗೃಹ ಇಲಾಖೆ ಮತ್ತು ಅಭಿಯೋಜನೆ ಇಲಾಖೆಗೆ ನೋಟಿಸ್ ನೀಡಿದೆ.
2 ವಾರಗಳೊಳಗೆ ಉತ್ತರ ಸಲ್ಲಿಸಲು ನಿರ್ದೇಶನ
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು ಇದೇ ರೀತಿಯ ಅಧಿಸೂಚನೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ನ ಹಿಂದಿನ ತೀರ್ಪಿಗೆ ಪ್ರಾಥಮಿಕ ದೃಷ್ಟಿಯಿಂದ ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಬು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಪ್ರಾಸಿಕ್ಯೂಷನ್ ನಿರ್ದೇಶನಾಲಯಕ್ಕೆ ನೀಡಲಾದ ನೋಟಿಸ್ಗೆ ಎರಡು ವಾರಗಳೊಳಗೆ ಉತ್ತರ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ PIL
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಗಿರೀಶ್ ಭಾರದ್ವಾಜ್ ಎಂಬವರು ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಹಾಜರಾದ ವಕೀಲ ವೆಂಕಟೇಶ್ ಪಿ. ದಳವಾಯಿ, ಅಪರಾಧ ಪ್ರಕ್ರಿಯಾ ಸಂಹಿತೆ (CrPC), 1973ರ ಸೆಕ್ಷನ್ 321ರ ಅಡಿಯಲ್ಲಿ ಸರ್ಕಾರಿ ಅಭಿಯೋಜಕರಿಗೆ (Public Prosecutor) ಇರುವ ಸ್ವತಂತ್ರ ವಿವೇಚನಾ ಅಧಿಕಾರವನ್ನು ಕಾರ್ಯಾಂಗವು ಕಸಿದುಕೊಂಡಿದೆ ಎಂದು ವಾದಿಸಿದ್ದರು. ಅಲ್ಲದೆ, ಪ್ರಕರಣ ಹಿಂಪಡೆಯುವ ನಿರ್ಧಾರವು ಯಾವುದೇ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
‘ಕಾನೂನು ಮೀರಿ ಆದೇಶ ಮಾಡಿಲ್ಲ’
ಇನ್ನು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಕ್ರಮಕ್ಕೆ ತಡೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೋರ್ಟ್ ಆದೇಶದ ಕಾಪಿ ಸಿಕ್ಕಿದ ಬಳಿಕ ಚರ್ಚೆ ಮಾಡುತ್ತೇವೆ. ಆ ಪ್ರಕರಣಗಳಲ್ಲಿ ಬಿಜೆಪಿ ನಾಯಕರ ಕೇಸ್ ಕೂಡ ಸೇರಿವೆ. ಕಾನೂನು ಮೀರಿ ನಾವು ಯಾವುದೇ ಆದೇಶವನ್ನು ಮಾಡಿಲ್ಲ. ಕಾನೂನು ಚೌಕಟ್ಟಿನಲ್ಲೇ ಸಂಪುಟದಲ್ಲಿ ನಿರ್ಧಾರ ಮಾಡಲಾಗಿತ್ತು ಎಂದವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:19 pm, Thu, 2 July 26