ಸಿನಿಮಾ ಪತ್ರಕರ್ತೆಯಾಗಿ ದಶಕಗಳ ಕಾಲ ಗುರುತಿಸಿಕೊಂಡಿದ್ದ ನೀರೂ ಶರ್ಮಾ (Neeru Sharma), ಇದೀಗ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಭರ್ಜರಿ ಪಾದಾರ್ಪಣೆ ಮಾಡಿದ್ದಾರೆ. ಅವರು ನಿರ್ದೇಶಿಸಿರುವ ಚೊಚ್ಚಲ ಶಾರ್ಟ್ ಫಿಲ್ಮ್ ‘ಬಾಂದ್ರಾ ಬಾಯ್’ (Bandra Boy) ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪ್ರಸಿದ್ಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ (Film Festivals) ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ.
ಭಾರತೀಯ ಚಿತ್ರರಂಗ ಹಾಗೂ ಟೆಲಿವಿಷನ್ ಜಗತ್ತನ್ನು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಅತ್ಯಂತ ಹತ್ತಿರದಿಂದ ನೋಡಿ, ವರದಿ ಮಾಡಿದ್ದ ಹಿರಿಯ ಪತ್ರಕರ್ತೆ ನೀರೂ ಶರ್ಮಾ, ಬಳಿಕ ಸ್ಕ್ರೀನ್ಪ್ಲೇ ಬರವಣಿಗೆ ಕಡೆಗೆ ಮುಖ ಮಾಡಿದ್ದಾರೆ. ಚಿತ್ರರಂಗದ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರ ‘ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯಲ್ಲಿ ಸಿನಿಮಾ ನಿರ್ದೇಶನ ಕೋರ್ಸ್ ಮುಗಿಸಿರುವ ಅವರು, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಪಡೆದಿದ್ದಾರೆ.
ನಿರ್ದೇಶನದ ಜೊತೆಗೆ 2015ರಿಂದಲೇ ಚಿತ್ರಕಥೆ ಬರೆಯುವುದರಲ್ಲೂ ತೊಡಗಿಸಿಕೊಂಡಿರುವ ನೀರೂ ಶರ್ಮಾ ಅವರು, ಬಾಲಿವುಡ್ನ ಹಿರಿಯ ನಟ ಬೊಮನ್ ಇರಾನಿ ಹಾಗೂ ಪ್ರಖ್ಯಾತ ಚಿತ್ರಕಥೆಗಾರರಾದ ಅಂಜುಮ್ ರಾಜಬಲಿ ಮತ್ತು ಮಯೂರ್ ಪುರಿ ಅವರ ಮಾರ್ಗದರ್ಶನದಲ್ಲಿ ಸ್ಕ್ರಿಪ್ಟ್ ರೈಟಿಂಗ್ ಡಿಪ್ಲೊಮಾ ಪೂರೈಸಿದ್ದಾರೆ. ಆ ಅನುಭವದಲ್ಲಿ ನಿರ್ದೇಶನ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾ ಯುಗದ ಕಥೆ ಹೇಳುವ ‘ಬಾಂದ್ರಾ ಬಾಯ್’:
ನೀರೂ ಶರ್ಮಾ ನಿರ್ದೇಶನದ ಚೊಚ್ಚಲ ಚಿತ್ರ ‘ಬಾಂದ್ರಾ ಬಾಯ್’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಮಾಧ್ಯಮಗಳ ಸುಳ್ಳು ಸುದ್ದಿಗಳು, ಸಾರ್ವಜನಿಕರ ತಪ್ಪು ಗ್ರಹಿಕೆಗಳು ಮತ್ತು ಸಮಾಜದ ಪೂರ್ವಾಗ್ರಹ ಪೀಡಿತ ನಿರ್ಧಾರಗಳು ಒಬ್ಬ ವ್ಯಕ್ತಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
‘ಬಾಂದ್ರಾ ಬಾಯ್’ ಚಿತ್ರದ ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?
ಈ ಥ್ರಿಲ್ಲರ್ ಶಾರ್ಟ್ ಫಿಲ್ಮ್ನಲ್ಲಿ ಅಹ್ವಾನ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಗುಜರಾತಿ ಮತ್ತು ಮರಾಠಿ ಚಿತ್ರರಂಗದ ಖ್ಯಾತ ನಟ ಧರ್ಮೇಂದ್ರ ಗೋಹಿಲ್ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇವರ ಜೊತೆಗೆ ವಿಸ್ಲಿಂಗ್ ವುಡ್ಸ್ ಸಂಸ್ಥೆಯ ಲೋಚನ್ ಬರ್ಸಾಗ್ಡೆ, ರಂಗಭೂಮಿ ಕಲಾವಿದ ಯಶ್ ಪೆಡ್ನೇಕರ್ ಹಾಗೂ ಕಿರುತೆರೆಯ ಜನಪ್ರಿಯ ನಟರಾದ ಪವನ್ ತಿವಾರಿ ಮತ್ತು ಶ್ಯಾಮ್ ಥೋಮ್ರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು
ವರದಿಗಾರ್ತಿಯಿಂದ ಕಥೆಗಾರ್ತಿಯಾಗಿ ಹೊಸ ಪಯಣ:
ಪತ್ರಿಕೋದ್ಯಮದಿಂದ ಚಿತ್ರರಂಗಕ್ಕೆ ಬಂದು ಯಶಸ್ವಿಯಾಗುವವರ ಸಂಖ್ಯೆ ತುಂಬಾ ಅಪರೂಪ. ಇಷ್ಟು ವರ್ಷಗಳ ಕಾಲ ಸಿನಿಮಾಗಳು, ಸೆಲೆಬ್ರಿಟಿಗಳು ಮತ್ತು ಬಾಕ್ಸ್ ಆಫೀಸ್ ವ್ಯವಹಾರದ ಬಗ್ಗೆ ವರದಿ ಮಾಡುತ್ತಿದ್ದ ನೀರೂ ಶರ್ಮಾ, ಈಗ ತಾವೇ ಕ್ಯಾಮೆರಾ ಹಿಂದೆ ನಿಂತು ಸ್ವಂತ ಕಥೆಗಳಿಗೆ ಜೀವ ನೀಡುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಬಾಂದ್ರಾ ಬಾಯ್’ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.