ಕಿಡ್ನಿ ಆರೋಗ್ಯ ಕಾಪಾಡಲು ತಿಳಿದಿರಬೇಕಾದ ಸಂಗತಿಗಳುImage Credit source: Getty Images
ಪ್ರೋಟೀನ್ (Protein) ದೇಹದ ಸ್ನಾಯುಗಳು, ರೋಗನಿರೋಧಕ ಶಕ್ತಿ ಮತ್ತು ಅಂಗಾಂಗಗಳ ದುರಸ್ತಿ ಕಾರ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಆದರೆ ಹೆಚ್ಚು ಪ್ರೋಟೀನ್ ಸೇವಿಸಿದರೆ ಕಿಡ್ನಿ (Kidneys) ಹಾಳಾಗುತ್ತದೆ ಎಂಬ ನಂಬಿಕೆ ಇನ್ನೂ ಹಲವರಲ್ಲಿದೆ. ನಿಜವಾಗಿಯೂ ಪ್ರೋಟೀನ್ ಕಿಡ್ನಿಗೆ ಹಾನಿಕಾರಕವೇ ಎಂಬ ಅನುಮಾನ ನಿಮಗೂ ಇದ್ದರೆ ಈ ಸ್ಟೋರಿ ಮೂಲಕ ಆ ಗೊಂದಲಕ್ಕೆ ತೆರೆ ಎಳೆಯಬಹುದು. ಆರೋಗ್ಯ ತಜ್ಞರು ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಪ್ರೋಟೀನ್ ಬಗ್ಗೆ ಇರುವ ತಪ್ಪು ಕಲ್ಪನೆಗಳು ಯಾವವು ಮತ್ತು ನಿಜವಾಗಿಯೂ ಪ್ರೋಟೀನ್ ಯೂರಿಕ್ ಆಸಿಡ್ ಹೆಚ್ಚಿಸುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರೋಟೀನ್ ಕಿಡ್ನಿಗೆ ಹಾನಿಕಾರಕವೇ?
ನೆಫ್ರಾಲಜಿಸ್ಟ್ಗಳ ಪ್ರಕಾರ, ಆರೋಗ್ಯಕರ ಕಿಡ್ನಿ ಹೊಂದಿರುವವರು ಸಮತೋಲನ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಿದರೆ ಸಾಮಾನ್ಯವಾಗಿ ಯಾವುದೇ ಹಾನಿಯಾಗುವುದಿಲ್ಲ. ಆದರೆ ಈಗಾಗಲೇ ದೀರ್ಘಕಾಲದ ಕಿಡ್ನಿ ಕಾಯಿಲೆ (CKD) ಇರುವವರು ವೈದ್ಯರು ಅಥವಾ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಸಲಹೆಯಂತೆ ಮಾತ್ರ ಪ್ರೋಟೀನ್ ಸೇವಿಸಬೇಕು.
ಪ್ರೋಟೀನ್ ಕಡಿಮೆ ಮಾಡಿದರೆ ಏನಾಗುತ್ತದೆ?
ಕೆಲವರು ಭಯದಿಂದ ಪ್ರೋಟೀನ್ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಇದರಿಂದ ಸ್ನಾಯುಗಳು ದುರ್ಬಲವಾಗುವುದು, ರೋಗನಿರೋಧಕ ಶಕ್ತಿ ಕುಸಿಯುವುದು ಹಾಗೂ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ವಯೋವೃದ್ಧರು ಮತ್ತು ಡಯಾಲಿಸಿಸ್ ರೋಗಿಗಳಿಗೆ ಸಾಕಷ್ಟು ಪ್ರೋಟೀನ್ ಅಗತ್ಯವಾಗಿರುತ್ತದೆ.
ಇದನ್ನೂ ಓದಿ: ದೊಡ್ಡವರು ತಿನ್ನುವ ಮಾತ್ರೆಯನ್ನು ಮಕ್ಕಳಿಗೆ ಅರ್ಧ ಮಾಡಿ ಕೊಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಪ್ರೋಟೀನ್ ಬಾಡಿಬಿಲ್ಡರ್ಗಳಿಗೆ ಮಾತ್ರವೇ?
ಇದು ಕೂಡ ತಪ್ಪು ಕಲ್ಪನೆ. ಪ್ರೋಟೀನ್ ಪ್ರತಿಯೊಬ್ಬರ ದೇಹಕ್ಕೂ ಅಗತ್ಯ. ಸ್ನಾಯು, ಮೂಳೆ, ಹಾರ್ಮೋನ್ ಹಾಗೂ ರೋಗನಿರೋಧಕ ವ್ಯವಸ್ಥೆಯ ಆರೋಗ್ಯಕ್ಕೆ ಇದು ಮುಖ್ಯ. ಬಾಡಿಬಿಲ್ಡರ್ಗಳಿಗೆ ಮಾತ್ರ ಇದರ ಪ್ರಮಾಣ ಹೆಚ್ಚು ಬೇಕಾಗಬಹುದು.
ಪ್ರೋಟೀನ್ ಯೂರಿಕ್ ಆಸಿಡ್ ಹೆಚ್ಚಿಸುತ್ತದೆಯೇ?
ಎಲ್ಲಾ ರೀತಿಯ ಪ್ರೋಟೀನ್ ಯೂರಿಕ್ ಆಸಿಡ್ ಹೆಚ್ಚಿಸುವುದಿಲ್ಲ. ಸಸ್ಯಾಹಾರ ಮೂಲದ ಪ್ರೋಟೀನ್ ಸಾಮಾನ್ಯವಾಗಿ ಈ ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ ಕೆಲವು ಪ್ರಾಣಿಜನ್ಯ ಆಹಾರಗಳು ಹಾಗೂ ಮದ್ಯಪಾನ ಯೂರಿಕ್ ಆಸಿಡ್ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಯಾವಾಗ ವೈದ್ಯರ ಸಲಹೆ ಪಡೆಯಬೇಕು?
ಕಿಡ್ನಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ, ಪ್ರೋಟೀನ್ ಪ್ರಮಾಣವನ್ನು ವೈದ್ಯರ ಸಲಹೆಯಂತೆ ನಿಗದಿಪಡಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಮಾಹಿತಿಯನ್ನು ಮಾತ್ರ ನಂಬದೆ, ಸಮತೋಲಿತ ಆಹಾರ ಮತ್ತು ತಜ್ಞರ ಮಾರ್ಗದರ್ಶನವನ್ನು ಅನುಸರಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ