‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಸಿನಿಮಾ ಆರಂಭದಲ್ಲಿ ಟೈಟಲ್ ಮೂಲಕ ಗಮನ ಸೆಳೆದಿತ್ತು. ಈಗ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಹೆಸರಿನ ವಿಭಿನ್ನ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮನುಷ್ಯನ ಮೂಲಭೂತ ಅಗತ್ಯಗಳಾದ ನೀರು ಮತ್ತು ಆಹಾರದ ಮಹತ್ವವನ್ನು ಸಾರುವ ಹಾಗೂ ಸರ್ಕಾರದ ಪಡಿತರ ವ್ಯವಸ್ಥೆಯ ಹಿನ್ನೆಲೆಯನ್ನು ಇದು ಒಳಗೊಂಡಿದೆ ಎಂಬುದು ವಿಶೇಷ. ರೇಷನ್ ಅಂಗಡಿಗಳ ಪ್ರಾಮುಖ್ಯತೆ ಮತ್ತು ಅವುಗಳ ಸುತ್ತ ನಡೆಯುವ ಕಥಾಹಂದರ ಹೊಂದಿರುವ ದೇಶದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ಇದೇ ವೇಳೆ ಚಿತ್ರತಂಡಕ್ಕೆ ಶುಭ ಹಾರೈಸಿದ ಸಚಿವರು. ಚಿತ್ರದ ತಾಂತ್ರಿಕ ವರ್ಗದ ಪ್ರಯತ್ನವನ್ನು ಶ್ಲಾಘಿಸಿದರು.
ಕುಮಾರ್ ಬಂಗಾರಪ್ಪ – ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆ
ಜಯಶಂಕರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ತೇಜು ಚೆಲುವಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಮಾಜಿ ಸಚಿವ ಹಾಗೂ ನಟ ಕುಮಾರ್ ಬಂಗಾರಪ್ಪ, ಗ್ಲಾಮರಸ್ ನಟಿ ರಾಗಿಣಿ ದ್ವಿವೇದಿ ಮತ್ತು ಹಿರಿಯ ನಟ ದೊಡ್ಡಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಹಾಲಿ ಕಾರ್ಯದರ್ಶಿ ಭಾ.ಮಾ. ಗಿರೀಶ್ ಅವರು ತಂಡಕ್ಕೆ ಬೆಂಬಲ ನೀಡಿದ್ದಾರೆ.
ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು, ಸಾತ್ವಿಕ್ ಪವನ್ ಅವರು ನಿರ್ದೇಶನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅನಂತ್ ಆರ್ಯನ್ ಮತ್ತು ಪ್ರವೀಣ್ ಅವರ ಜಂಟಿ ಸಂಗೀತ ನಿರ್ದೇಶನವಿದ್ದು, ನವೀನ್ ಸಜ್ಜು, ಅನುರಾಧ ಭಟ್ ಮತ್ತು ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ.
ಇದನ್ನೂ ಓದಿ: ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ
ಇತ್ತೀಚೆಗೆ ಚಿತ್ರದ ‘ಟೈಟಲ್ ಟ್ರ್ಯಾಕ್’ ಬಿಡುಗಡೆಯಾಗಿ ಗಮನ ಸೆಳೆದಿದೆ. ಸಿನಿಮಾಗೆ ಸಂಬಂಧಿಸಿದ ಅಪ್ಡೇಟ್ಗಳನ್ನು ‘Aiplex Music’ ಯುಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ. ‘ಶ್ರೀಧರ್ ಕೃಪ ಕಂಬೈನ್ಸ್’ ಸಂಸ್ಥೆಯ ಶ್ರೀಧರ್ ಅವರು ಈ ಚಿತ್ರವನ್ನು ಇಡೀ ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 11:54 am, Sat, 4 July 26