ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ (Prajwal Devaraj) ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು. ಅವರ ಸಹೋದರ ಪ್ರಣಾಮ್ ದೇವರಾಜ್ ಸಹ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ, ಆದರೆ ಅಣ್ಣನಷ್ಟು ದೊಡ್ಡ ಯಶಸ್ಸು ಈ ವರೆಗೆ ಲಭಿಸಿಲ್ಲ, ಆದರೆ ಪ್ರಣಾಮ್ ಅವರು ಭಿನ್ನ-ಭಿನ್ನ ಜಾನರ್ಗಳ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇದೀಗ ಪ್ರಣಾಮ್ ಅವರು ‘ಶ್ರೀರಸ್ತು’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾನಲ್ಲಿ ತಮ್ಮನ ಜೊತೆಗೆ ಅಣ್ಣ ಪ್ರಜ್ವಲ್ ಸಹ ನಟಿಸಿದ್ದಾರೆ.
ಪ್ರಣಾಮ್ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಆದರೆ ಈ ವರೆಗೆ ಈ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಣ್ಣ-ತಮ್ಮ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಶ್ರೀರಸ್ತು’ ಸಿನಿಮಾನಲ್ಲಿ ಪ್ರಣಾಮ್ ಜೊತೆಗೆ ಪ್ರಜ್ವಲ್ ಸಹ ನಟಿಸಿದ್ದಾರೆ. ಇಂದು ಪ್ರಜ್ವಲ್ ದೇವರಾಜ್ ಜನ್ಮದಿನದ ಪ್ರಯುಕ್ತ ಶ್ರೀರಸ್ತು ಚಿತ್ರತಂಡ ಶುಭ ಕೋರುವ ಪೋಸ್ಟರ್ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದು, ಪೋಸ್ಟರ್ಗಳಲ್ಲಿ ಪ್ರಣಾಮ್ ಜೊತೆಗೆ ಪ್ರಜ್ವಲ್ ಸಹ ಇದ್ದಾರೆ.
‘ಶ್ರೀರಸ್ತು’ ಕೌಟುಂಬಿಕ ಸಿನಿಮಾ ಆಗಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಪ್ರಣಮ್ಗೆ ಜೋಡಿ ಸಂಜನಾ ಆನಂದ್ ಜೋಡಿ ಆಗಿದ್ದಾರೆ. ಆದರೆ ಇದೀಗ ಪ್ರಜ್ವಲ್ ಕೂಡ ಸೇರಿಕೊಂಡಿದ್ದಾರೆ. ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿಯನ್ನು ತೋರಿಸುವಂಥ ಒಂದು ವಿಭಿನ್ನ ಚಿತ್ರವಾಗಿ ಶ್ರೀರಸ್ತು ಮೂಡಿ ಬರಲಿದೆ ಎಂದು ನಿರ್ದೇಶಕ ಶಂಕರ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ:‘ಕರಾವಳಿ’ ಸಿನಿಮಾ ಸೆಟ್ನಲ್ಲಿ ಪ್ರಜ್ವಲ್ ದೇವರಾಜ್ ಕ್ರಿಕೆಟ್ ಆಟ: ವಿಡಿಯೋ
ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ಬಿಡುಗಡೆ ಆಗಲಿರುವುದು ವಿಶೇಷ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್, ಆಮನಿ, ಚೈತ್ರಾರೈ, ರವಿ ಶಿವತೇಜ, ಜೋಶ್ ರವಿ, ರವಿ ಪ್ರಕಾಶ್ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಹರಗೌಡ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ನಿರ್ಮಿಸುತ್ತಿದ್ದಾರೆ. ಪುಷ್ಪ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲಸರಸ್ವತಿ ಈ ಚಿತ್ರದ ಕ್ಯಾಮರಾಮ್ಯಾನ್. ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ. ‘ಶ್ರೀರಸ್ತು’ ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತ ಈಗಾಗಲೇ ಗಮನ ಸೆಳೆದಿದೆ. ಶೇಖರ್ ಚಂದ್ರು ಅವರು ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಶೀಘ್ರವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ