ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿ ಯುಗಾರಂಭವಾಗಿದೆ. ಮ್ಯಾಚೆಂಸ್ಟರ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ಮೂಲಕ ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಾದಾರ್ಪಣೆಯೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಶಕಗಳ ಹಳೆಯ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಭಾರತೀಯ ಕ್ರಿಕೆಟ್ನಲ್ಲಿ ಈವರೆಗೆ ಯಾರೂ ಮಾಡದ ವಿಶಿಷ್ಟ ಹಾಗೂ ಅಪರೂಪದ ಔಟಿಂಗ್ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಹೀಗೊಂದು ದಾಖಲೆ:
ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಈವರೆಗೆ 122 ಆಟಗಾರರು ಆಡಿದ್ದಾರೆ. ಈ 122 ಆಟಗಾರರಲ್ಲಿ ಪಾದಾರ್ಪಣೆ ಪಂದ್ಯದಲ್ಲೇ ಸ್ಟಂಪ್ ಔಟ್ ಆಗಿದ್ದು ವೈಭವ್ ಸೂರ್ಯವಂಶಿ ಮಾತ್ರ ಎಂದರೆ ನಂಬಲೇಬೇಕು. ಅಂದರೆ ಈ ಹಿಂದೆ ಕಣಕ್ಕಿಳಿದ 121 ಆಟಗಾರರು ಮೊದಲ ಮ್ಯಾಚ್ನಲ್ಲಿ ಸ್ಟಂಪ್ ಔಟ್ ಆಗಿರಲಿಲ್ಲ.
ಆದರೆ ಮ್ಯಾಂಚೆಸ್ಟರ್ನಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ನ ಆಫ್-ಸ್ಪಿನ್ನರ್ ವಿಲ್ ಜಾಕ್ಸ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಹೋಗಿ ಮಿಸ್ ಮಾಡಿದರು. ಕ್ಷಣಾರ್ಧದಲ್ಲೇ ವಿಕೆಟ್ ಕೀಪರ್ ಜೋಸ್ ಬಟ್ಲರ್ ಬೆಲ್ಸ್ ಹಾರಿಸಿದರು.
ಇದರೊಂದಿಗೆ ಭಾರತದ ಪರ ಟಿ20 ಪಾದಾರ್ಪಣೆ ಪಂದ್ಯದಲ್ಲೇ ಸ್ಟಂಪ್ ಔಟ್ ಆದ ಮೊದಲ ಆಟಗಾರ ಎಂಬ ವಿಚಿತ್ರ ದಾಖಲೆಯೊಂದು ವೈಭವ್ ಸೂರ್ಯವಂಶಿ ಹೆಸರಿಗೆ ಸೇರ್ಪಡೆಯಾಯಿತು.
ಹೊಸ ಇತಿಹಾಸ:
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ, ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ 15 ವರ್ಷ 99 ದಿನಗಳ ಪ್ರಾಯದಲ್ಲಿ ಕಣಕ್ಕಿಳಿಯುವ ಮೂಲಕ ವೈಭವ್, 1989ರಲ್ಲಿ ಸಚಿನ್ ತೆಂಡೂಲ್ಕರ್ (16 ವರ್ಷ 205 ದಿನ) ನಿರ್ಮಿಸಿದ್ದ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಯಾರ ಹೆಸರಲ್ಲಿದೆ ವಿಶ್ವ ದಾಖಲೆ?
ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರೂ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’!
ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 14 ವರ್ಷಕ್ಕೆ ಪಂದ್ಯವಾಡಿದ ಆಟಗಾರರಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರನ ಹೆಸರು ಹಸನ್ ರಾಝ.
- ಹಸನ್ ರಾಝ (ಟೆಸ್ಟ್): 1996 ರಲ್ಲಿ ಹಸನ್ ರಾಝ ಪಾಕಿಸ್ತಾನ್ ಪರ ಮೊದಲ ಟೆಸ್ಟ್ ಪಂದ್ಯವಾಡುವಾಗ ಅವರ ವಯಸ್ಸು ಕೇವಲ ವಯಸ್ಸು ಕೇವಲ 14 ವರ್ಷ 227 ದಿನಗಳು.
- ಹಸನ್ ರಾಝ (ಏಕದಿನ): ಟೆಸ್ಟ್ ಆಡಿದ ಕೆಲವೇ ದಿನಗಳಲ್ಲಿ (14 ವರ್ಷ 233 ದಿನಗಳು) ಏಕದಿನ ಕ್ರಿಕೆಟ್ಗೂ ಪದಾರ್ಪಣೆ ಮಾಡಿ ಎರಡೂ ಫಾರ್ಮ್ಯಾಟ್ಗಳಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹಸನ್ ರಾಝ ನಿರ್ಮಿಸಿದ್ದಾರೆ.
- ಮೇರಿಯನ್ ಗೆರಾಸಿಮ್ (ಟಿ20): ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಣಕ್ಕಿಳಿದ ಕಿರಿಯ ಆಟಗಾರ ಎಂಬ ರೊಮೇನಿಯಾದ ಮೇರಿಯನ್ ಗೆರಾಸಿಮ್ ಹೆಸರಿನಲ್ಲಿದೆ. 2020 ರಲ್ಲಿ ಬಲ್ಗೇರಿಯಾ ವಿರುದ್ಧ ಕಣಕ್ಕಿಳಿದಾಗ ಮೇರಿಯನ್ ಗೆರಾಸಿಮ್ ಅವರ ವಯಸ್ಸು 14 ವರ್ಷ 16 ದಿನಗಳು.
𝘼𝙖𝙩𝙚 𝙝𝙞 𝙠𝙖𝙖𝙢 𝙨𝙝𝙪𝙧𝙪 𝙠𝙖𝙧 𝙙𝙞𝙮𝙚… 😅
Just the beginning, #VaibhavSooryavanshi smashes his FIRST INTERNATIONAL SIX FOR INDIA! 🙌#ENGvIND 2nd T20I 👉 Streaming LIVE on JioHotstar! pic.twitter.com/5Qa9iPRJ0x
— Star Sports (@StarSportsIndia) July 4, 2026
ಇದೀಗ 15ನೇ ವಯಸ್ಸಿನಲ್ಲಿ ಕಣಕ್ಕಿಳಿಯುವ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಇಂಟರ್ನ್ಯಾಷನಲ್ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 10 ಎಸೆತಗಳನ್ನು ಎದುರಿಸಿದ ಯುವ ದಾಂಡಿಗ 2 ಭರ್ಜರಿ ಸಿಕ್ಸರ್ಗಳೊಂದಿಗೆ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು.