Headlines

‘ಆಲ್ಫಾ’ ಬಾಕ್ಸ್ ಆಫೀಸ್ ಕಲೆಕ್ಷನ್; ಎರಡನೇ ದಿನವೂ ಮಂಕಾದ ಅಲಿಯಾ ಭಟ್ ಸಿನಿಮಾ – Kannada News | Alpha Box Office Collection Day 2 Alia bhatt Sharvari YRF Spy Universe Movie

ಯಶ್ ರಾಜ್ ಫಿಲ್ಮ್ಸ್ (YRF) ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರ ಎಂದೇ ಭಾರಿ ಸದ್ದು ಮಾಡಿದ್ದ ‘ಆಲ್ಫಾ’ (Alpha) ಸಿನಿಮಾ ಜುಲೈ 3ರಂದು ಅದ್ದೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಆ್ಯಕ್ಷನ್ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ನೇರ ಪರಿಣಾಮ ಈಗ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಮೇಲೂ ಬೀರಿದೆ. ಸಾಮಾನ್ಯವಾಗಿ ವೀಕೆಂಡ್, ಅದರಲ್ಲೂ ಮೊದಲ ಶನಿವಾರದಂದು ಚಿತ್ರದ ಕಲೆಕ್ಷನ್‌ನಲ್ಲಿ ಭಾರಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ‘ಆಲ್ಫಾ’ ಚಿತ್ರದ ವಿಚಾರದಲ್ಲಿ ಅದು ಉಲ್ಟಾ ಹೊಡೆದಿದ್ದು, ಎರಡನೇ ದಿನದ ಗಳಿಕೆಯಲ್ಲಿ ಕುಸಿತ ಕಂಡಿದೆ.

ಎರಡನೇ ದಿನ ‘ಆಲ್ಫಾ’ ಸಿನಿಮಾದ ಗಳಿಕೆ ಎಷ್ಟು?

ಚಿತ್ರರಂಗದ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ನೀಡಿರುವ ಮಾಹಿತಿ ಪ್ರಕಾರ, ಶನಿವಾರದಂದು ಒಟ್ಟು 5,877 ಶೋಗಳಿಂದ ಈ ಸಿನಿಮಾ ಕೇವಲ 8.67 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ (ಶುಕ್ರವಾರ) ಭಾರತದಲ್ಲಿ 9.25 ಕೋಟಿ ರೂಪಾಯಿ ಗಳಿಸುವ ಮೂಲಕ ಸಾಧಾರಣ ಆರಂಭ ಪಡೆದುಕೊಂಡಿತ್ತು. ದೇಶಾದ್ಯಂತ ಒಟ್ಟು 7,534 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಇಷ್ಟು ದೊಡ್ಡ ಮಟ್ಟದ ಹೈಪ್ ಇತ್ತಾದರೂ, ವೈಆರ್‌ಎಫ್ ಸ್ಪೈ ಯೂನಿವರ್ಸ್​ನ ಇತರೆ ಸಿನಿಮಾಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಓಪನಿಂಗ್. ಸದ್ಯಕ್ಕೆ ಎರಡು ದಿನಗಳ ಚಿತ್ರದ ಒಟ್ಟು ಕಲೆಕ್ಷನ್ 17.92 ಕೋಟಿ ರೂಪಾಯಿಗೆ ಬಂದು ತಲುಪಿದೆ.

ವೈಆರ್‌ಎಫ್ ಸ್ಪೈ ಯೂನಿವರ್ಸ್ ಸಿನಿಮಾಗಳಿಗೆ ಹೋಲಿಕೆ:

2023ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ನಟನೆಯ ಸೂಪರ್ ಹಿಟ್ ಚಿತ್ರ ‘ಪಠಾಣ್’, ತನ್ನ ಎರಡನೇ ದಿನ ಭಾರತದಲ್ಲಿ ಬರೋಬ್ಬರಿ 70.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಅದೇ ವರ್ಷ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಸಿನಿಮಾ ದೇಶಾದ್ಯಂತ ಒಟ್ಟು 19,646 ಶೋಗಳಿಂದ ಎರಡನೇ ದಿನ 59.25 ಕೋಟಿ ರೂ. ಬಾಚಿಕೊಂಡಿತ್ತು.

ಅತ್ಯಂತ ಕಳಪೆ ಕಲೆಕ್ಷನ್ ಮಾಡಿದ ಸಿನಿಮಾ:

ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ಬಿಗ್ ಆ್ಯಕ್ಷನ್ ಸಿನಿಮಾ ‘ವಾರ್ 2’, ತನ್ನ ಎರಡನೇ ದಿನ 18,228 ಶೋಗಳಿಂದ 57.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ ಈ ಎಲ್ಲಾ ದೈತ್ಯ ಸಿನಿಮಾಗಳ ಎದುರು ಅಲಿಯಾ ಭಟ್ ಮತ್ತು ಶರ್ವರಿ ನಟನೆಯ ‘ಆಲ್ಫಾ’ ಸಿನಿಮಾ ಕೇವಲ 5,877 ಶೋಗಳಿಂದ ಕೇವಲ 8.67 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ವೈಆರ್‌ಎಫ್ ಸ್ಪೈ ಯೂನಿವರ್ಸ್ ಇತಿಹಾಸದಲ್ಲೇ ಎರಡನೇ ದಿನದ ಅತ್ಯಂತ ಕಳಪೆ ಕಲೆಕ್ಷನ್ ದಾಖಲಿಸಿದ ಚಿತ್ರ ‘ಆಲ್ಫಾ’ ಆಗಿದೆ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್

ಶಿವ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಅಲಿಯಾ ಭಟ್ ಮತ್ತು ಶರ್ವರಿ ವಾಗ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಬಾಬಿ ಡಿಯೋಲ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಶೇಷವೆಂದರೆ, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಸ್ಟಾರ್ ಸ್ಪೈ ‘ಕಬೀರ್’ ಪಾತ್ರದಲ್ಲಿ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಾಗಿದ್ದರೂ ಚಿತ್ರದ ಕಲೆಕ್ಷನ್ ಹೆಚ್ಚುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *