Headlines

ಭಾರೀ ಮಳೆಯಿಂದ ಕೋರ್ಟ್​ಗೆ ಬರಲಾಗದ ವಕೀಲರಿಗೆ ನಿರಾಳ; ಬಾಂಬೆ ಹೈಕೋರ್ಟ್​ ಹೇಳಿದ್ದೇನು? – Kannada News | No adverse orders if lawyers not able to reach court due to heavy rains Bombay High Court

ಮುಂಬೈ, ಜುಲೈ 6: ಮುಂಬೈ (Mumbai Rains) ನಗರ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ವಕೀಲರಿಗೆ ನ್ಯಾಯಾಲಯಗಳಿಗೆ ತಲುಪಲು ಸಾಧ್ಯವಾಗದಿದ್ದರೆ, ಆ ಪ್ರಕರಣಗಳಲ್ಲಿ ಯಾವುದೇ ಪ್ರತಿಕೂಲ ಆದೇಶಗಳನ್ನು ಹೊರಡಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಭರವಸೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಮುಂಬೈ, ಥಾಣೆ ಮತ್ತು ರಾಯಗಢ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಬಲವಾದ ಗಾಳಿಯೊಂದಿಗೆ ಭಾರೀ ಪ್ರಮಾಣದಿಂದ ಅತಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಅಲ್ಲದೆ ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮನವಿ ಮಾಡಿದೆ.

ಕೋರ್ಟ್​ಗೆ ಬರಲಾಗದಿದ್ದರೆ ತೊಂದರೆಯಿಲ್ಲ:

ತೀವ್ರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮತ್ತು ನಗರ ಪ್ರದೇಶಗಳು ಜಲಾವೃತಗೊಳ್ಳಬಹುದು ಮತ್ತು ಹಠಾತ್ ಪ್ರವಾಹ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಮಳೆಯ ಕಾರಣದಿಂದಾಗಿ ಸೋಮವಾರ ವಕೀಲರು ಗೈರುಹಾಜರಾದರೆ, ಅವರ ಗೈರುಹಾಜರಾಗಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಪ್ರತಿಕೂಲ ಅಥವಾ ವಜಾ ಆದೇಶಗಳನ್ನು ಪಾಸ್ ಮಾಡಲಾಗುವುದಿಲ್ಲ ಎಂದು ಉಸ್ತುವಾರಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಗುಗೆ ಅವರು ವಕೀಲರ ಸಂಘಗಳಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ

ಮುಖ್ಯ ನ್ಯಾಯಮೂರ್ತಿಗಳು ನೀಡಿರುವ ಈ ಭರವಸೆಯು ಮುಂಬೈನಲ್ಲಿರುವ ಹೈಕೋರ್ಟ್‌ನ ಎಲ್ಲಾ ಇತರ ಪೀಠಗಳಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಇದರಿಂದಾಗಿ ಮಳೆಯ ನಡುವೆಯೂ ನ್ಯಾಯಾಲಯಕ್ಕೆ ಬರಲು ಪರದಾಡುತ್ತಿದ್ದ ನೂರಾರು ವಕೀಲರು ನಿರಾಳರಾಗಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸಂಪರ್ಕ ಸೇತುವೆಗಳು ಜಲಾವೃತ

ಮುಂಬೈನಲ್ಲಿ ಮಳೆಯ ಆರ್ಭಟ:

ಮುಂಬೈನಲ್ಲಿ ಭಾರೀ ಮಳೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಮುಂಬೈ, ಪುಣೆ, ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಭಾರೀ ಮಳೆಯಿಂದಾಗಿ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದು, ಮುಂಬೈ-ಪುಣೆ ನಡುವಿನ ದೂರದ ರೈಲುಗಳನ್ನು ರದ್ದುಗೊಳಿಸಲಾಗಿದೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಕಾರ್ಯಾಚರಣೆಯನ್ನು ಸುಮಾರು 1 ಗಂಟೆ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ 17ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, 200ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಿದೆ. ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಹಾರಾಷ್ಟ್ರದಲ್ಲಿ ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *