Headlines

‘10 ಆನೆ ದಂತ, 13 ದಂತದ ಮೂರ್ತಿ ನನ್ನ ಬಳಿ ಇವೆ’: ಒಪ್ಪಿಕೊಂಡ ನಟ ಮೋಹನ್​ಲಾಲ್ – Kannada News | Mohanlal Declares Elephant Tusks Ivory Idols to Kerala Forest Department Amnesty

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರು ತಮ್ಮ ಬಳಿಯಿರುವ 10 ಆನೆ ದಂತಗಳು ಮತ್ತು ಆನೆದಂತದಿಂದ ಮಾಡಿದ 13 ಮೂರ್ತಿಗಳನ್ನು ಕೇರಳ ಅರಣ್ಯ ಇಲಾಖೆಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಕೇರಳ ಹೈಕೋರ್ಟ್ 2025ರಲ್ಲಿ ಮೋಹನ್‌ಲಾಲ್ ಅವರ ಬಳಿಯಿದ್ದ ಆನೆ ದಂತಗಳ (Elephant Tusks) ಮಾಲೀಕತ್ವದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಇಡೀ ಪ್ರಕರಣವು 2011ರ ಆದಾಯ ತೆರಿಗೆ ಇಲಾಖೆಯ ದಾಳಿಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು.

2011ರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಣಕಾಸಿನ ದಾಖಲೆಗಳು ಮತ್ತು ನಗದನ್ನು ಹುಡುಕುತ್ತಾ ಕೊಚ್ಚಿಯಲ್ಲಿರುವ ಮೋಹನ್‌ಲಾಲ್ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ, ಅಲ್ಲಿ ಪಾರಂಪರಿಕ ವಸ್ತುಗಳಂತೆ ಪ್ರದರ್ಶನಕ್ಕೆ ಇಡಲಾಗಿದ್ದ ಆನೆ ದಂತಗಳು ಮತ್ತು ಆನೆದಂತದ ಕಲಾಕೃತಿಗಳು ಪತ್ತೆಯಾಗಿದ್ದವು. ಸರ್ಕಾರದ ಸೂಕ್ತ ಪ್ರಮಾಣಪತ್ರವಿಲ್ಲದೆ ಆನೆದಂತವನ್ನು ಹೊಂದುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ‘ವನ್ಯಜೀವಿ (ರಕ್ಷಣೆ) ಕಾಯ್ದೆ, 1972’ರ ಅಡಿಯಲ್ಲಿ ಈ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.

‘ಕಾನೂನುಬಾಹಿರ ಎಂಬುದು ತಿಳಿದಿರಲಿಲ್ಲ’

ದಾಖಲೆಗಳ ಪ್ರಕಾರ, ಸ್ವಾಭಾವಿಕವಾಗಿ ಮರಣ ಹೊಂದಿದ ಸಾಕಾನೆಗಳಿಂದ ಈ ದಂತಗಳು ಬಂದಿದ್ದು, ನೆನಪಿಗಾಗಿ ಇಟ್ಟುಕೊಂಡಿರುವುದಾಗಿ ಮೋಹನ್‌ಲಾಲ್ ಅವರು ಹೇಳಿಕೊಂಡಿದ್ದರು. ಅಲ್ಲದೆ, ಇದನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರ ಎಂಬುದು ತಮಗೆ ತಿಳಿದಿರಲಿಲ್ಲ ಎಂದಿದ್ದರು. 2015ರಲ್ಲಿ ಸರ್ಕಾರವು ಅವರಿಗೆ ದಂತಗಳನ್ನು ಘೋಷಿಸಲು ಅವಕಾಶ ನೀಡಿದ ನಂತರ ಮತ್ತು 2016ರಲ್ಲಿ ಮಾಲೀಕತ್ವದ ಪ್ರಮಾಣಪತ್ರವನ್ನು ನೀಡಿದ ಬಳಿಕ ಪ್ರಕರಣವು ತಣ್ಣಗಾಗಿತ್ತು.

ಹೈಕೋರ್ಟ್ ನೀಡಿದ್ದ ತೀರ್ಪು ಏನು?

ಈ ಪ್ರಕರಣವು ಮೊದಲು 2011ರಲ್ಲಿ ಪೆರುಂಬಾವೂರು ನ್ಯಾಯಾಲಯವನ್ನು ತಲುಪಿತ್ತು. ಬಳಿಕ ಮೋಹನ್‌ಲಾಲ್ ಇದನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಪಡೆದಿದ್ದ ಮಧ್ಯಂತರ ತಡೆಯಾಜ್ಞೆಯು 2025ರವರೆಗೆ ಜಾರಿಯಲ್ಲಿತ್ತು. 2016 ಮತ್ತು 2019ರಲ್ಲಿ ಅವರು ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ವಿನಂತಿಸಿದ್ದರು. ಆದರೆ, ಈ ಅರ್ಜಿಯನ್ನು 2023ರಲ್ಲಿ ವಜಾಗೊಳಿಸಲಾಯಿತು.

ಪ್ರಮಾಣಪತ್ರಗಳು ಕಾನೂನುಬದ್ಧವಾಗಿ ಸಿಂಧುವಲ್ಲ:

ನಂತರ ಅಕ್ಟೋಬರ್ 2025ರಲ್ಲಿ, ನಿವೃತ್ತ ಅರಣ್ಯ ಅಧಿಕಾರಿಗಳು ಮತ್ತು ಪರಿಸರವಾದಿಗಳ ಅರ್ಜಿಯನ್ನು ಆಲಿಸಿದ ಹೈಕೋರ್ಟ್, ನಟನಿಗೆ ನೀಡಲಾಗಿದ್ದ ಮಾಲೀಕತ್ವದ ಪ್ರಮಾಣಪತ್ರಗಳು ಕಾನೂನುಬದ್ಧವಾಗಿ ಸಿಂಧುವಲ್ಲ ಎಂದು ತೀರ್ಪು ನೀಡಿತು ಮತ್ತು ಹೊಸ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಆದಾಗ್ಯೂ, ನ್ಯಾಯಾಲಯವು ನಟನ ವಿರುದ್ಧ ಕಾನೂನು ಕ್ರಮ ಜರುಗಿಸಲು ನೇರ ಆದೇಶ ನೀಡಿರಲಿಲ್ಲ.

ಇದನ್ನೂ ಓದಿ: ದೃಶ್ಯಂ 3: ಮೋಹನ್​ಲಾಲ್ ಕಾರ್ ನಂಬರ್​ನಿಂದ ರೈತನಿಗೆ ಮಾನಸಿಕ ಕಿರಿಕಿರಿ; ದಾಖಲಾಯ್ತು ದೂರು

ಈ ಎಲ್ಲಾ ವರ್ಷಗಳ ಕಾನೂನು ಹೋರಾಟದ ನಂತರ, ಮೋಹನ್‌ಲಾಲ್ ಈಗ ಅರಣ್ಯ ಇಲಾಖೆಯ ‘ಅಮ್ನೆಸ್ಟಿ ಯೋಜನೆ’ (ಸ್ವಯಂ ಘೋಷಣೆ ಯೋಜನೆ) ಅಡಿಯಲ್ಲಿ ಒಟ್ಟು 10 ಆನೆ ದಂತಗಳು (ಮೊದಲು ಘೋಷಿಸಿದ್ದಕ್ಕಿಂತ 6 ಹೆಚ್ಚು) ಮತ್ತು 13 ಆನೆದಂತದ ಮೂರ್ತಿಗಳನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಸಾರ್ವಜನಿಕರು ತಮ್ಮ ಬಳಿ ಇರುವ ನೋಂದಣಿಯಾಗದ ವನ್ಯಜೀವಿ ವಸ್ತುಗಳನ್ನು ಸ್ವಯಂಪ್ರೇರಿತವಾಗಿ ಘೋಷಿಸಿ ಕಾನೂನು ಕ್ರಮದಿಂದ ವಿನಾಯಿತಿ ಪಡೆಯಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *