Headlines

ಇಂಡೋನೇಷ್ಯಾ ಪ್ರವಾಸದಲ್ಲಿ ಪ್ರಧಾನಿ ಮೋದಿ: ಭಾರತದ ‘ಅಸ್ತ್ರ’ ಕ್ಷಿಪಣಿ ಖರೀದಿಗೆ ಒಪ್ಪಂದ – Kannada News | PM Modi in Indonesia: Astra Missile Deal, Sabang Port and Critical Mineral Investment Boost India’s Global Role

ಜಕಾರ್ತ, ಜುಲೈ 07: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಇಂಡೋನೇಷ್ಯಾ ಪ್ರವಾಸವು ಉಭಯ ದೇಶಗಳ ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಈ ಪ್ರವಾಸದ ವೇಳೆ ಭಾರತ ಮತ್ತು ಇಂಡೋನೇಷ್ಯಾ ನಡುವೆ ಹಲವು ಐತಿಹಾಸಿಕ ಮತ್ತು ಮಹತ್ವದ ಒಪ್ಪಂದಗಳು ಏರ್ಪಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನ ಹಾಗೂ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ದೊಡ್ಡ ಮನ್ನಣೆ ಸಿಕ್ಕಿದೆ.

ಇಂಡೋನೇಷ್ಯಾ ಚುನಾವಣೆಗೆ ಭಾರತದ ಇವಿಎಂ ಮಾದರಿ
ಭಾರತದ ಬಲಿಷ್ಠ ಮತ್ತು ಯಶಸ್ವಿ ಚುನಾವಣಾ ನಿರ್ವಹಣಾ ಮಾದರಿಯನ್ನು ಇಂಡೋನೇಷ್ಯಾ ಮುಕ್ತವಾಗಿ ಶ್ಲಾಘಿಸಿದೆ. ಅಲ್ಲಿನ ಮುಂಬರುವ ಚುನಾವಣೆಗಳಿಗಾಗಿ ಇಂಡೋನೇಷ್ಯಾದ ಅಗತ್ಯಕ್ಕೆ ತಕ್ಕಂತೆ ವಿಶೇಷ ಇವಿಎಂ (EVM – ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಭಾರತ ಸಂಪೂರ್ಣ ಬೆಂಬಲ ನೀಡಲಿದೆ.

ಭಾರತದ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಇಂಡೋನೇಷ್ಯಾ
ಭಾರತೀಯ ವಾಯುಸೇನೆಯ ಇತ್ತೀಚಿನ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಾರತದಲ್ಲೇ ತಯಾರಾದ ಗಾಕಿನಿಂದ ಗಾಳಿಗೆ ಚಿಮ್ಮುವ ‘ಅಸ್ತ್ರ’ (Astra Missile) ಕ್ಷಿಪಣಿಗಳ ಭೀಕರ ಯಶಸ್ಸನ್ನು ಕಂಡು ಇಂಡೋನೇಷ್ಯಾ ಬೆರಗಾಗಿದೆ. ಹೀಗಾಗಿ, ತನ್ನ ವಾಯುಪಡೆಯ ಬಲವನ್ನು ಹೆಚ್ಚಿಸಿಕೊಳ್ಳಲು ಭಾರತದಿಂದ ‘ಅಸ್ತ್ರ’ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಇಂಡೋನೇಷ್ಯಾ ನಿರ್ಧರಿಸಿದೆ.

ಮತ್ತಷ್ಟು ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ

‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ಷಿಪಣಿ ಖರೀದಿ ವಿಸ್ತರಣೆ
ಇಂಡೋನೇಷ್ಯಾ ಈಗಾಗಲೇ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸುತ್ತಿದೆ. ಈಗ ತನ್ನ ಬ್ರಹ್ಮೋಸ್ ಕ್ಷಿಪಣಿಗಳ ಸಂಗ್ರಹವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಭಾರತವು ಇಂಡೋನೇಷ್ಯಾಕ್ಕೆ ಹೆಚ್ಚಿನ ಬ್ರಹ್ಮೋಸ್ ಕ್ಷಿಪಣಿ ಬ್ಯಾಟರಿಗಳನ್ನು ಮತ್ತು ತಾಂತ್ರಿಕ ನೆರವನ್ನು ನೀಡಲು ಒಪ್ಪಿಗೆ ಸೂಚಿಸಿದೆ.

ಚೀನಾಕ್ಕೆ ಟಕ್ಕರ್: ಜಂಟಿಯಾಗಿ ‘ಸಬಾಂಗ್ ಬಂದರು’ ಅಭಿವೃದ್ಧಿ
ಸಮುದ್ರ ಮಾರ್ಗದ ಭದ್ರತೆ ಮತ್ತು ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಜಾಗದಲ್ಲಿರುವ ಸಬಾಂಗ್ ಬಂದರನ್ನು (Sabang Port) ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. ಈ ಬಂದರು ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ ‘ಮಲಕ್ಕಾ ಜಲಸಂಧಿ’ಯ (Strait of Malacca) ಮೇಲ್ವಿಚಾರಣೆ ನಡೆಸಲು ಸಹಕಾರಿಯಾಗಿದೆ. ವಿಶೇಷವೆಂದರೆ, ಭಾರತದ ಗ್ರೇಟ್ ನಿಕೋಬಾರ್ ಬಂದರು ಯೋಜನೆಯಿಂದ ಇದು ಕೇವಲ 100 ಮೈಲಿ ದೂರದಲ್ಲಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಕ್ಕ ಟಕ್ಕರ್ ನೀಡಲಿದೆ.

ಖನಿಜ ವಲಯದಲ್ಲಿ ಭಾರಿ ಹೂಡಿಕೆ
ಭವಿಷ್ಯದ ಕೈಗಾರಿಕೆಗಳಿಗೆ ಅತ್ಯಂತ ಅಗತ್ಯವಿರುವ ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಇಂಡೋನೇಷ್ಯಾದಲ್ಲಿ ಉಕ್ಕು (Steel), ನಿಕಲ್ ಮತ್ತು ಅಪರೂಪದ ಭೂಮಿಯ ಖನಿಜಗಳಿಂದ ತಯಾರಾಗುವ ಕಾಯಂ ಕಾಂತಗಳ ಉತ್ಪಾದನಾ ವಲಯದಲ್ಲಿ ಭಾರಿ ಹೂಡಿಕೆ ಮಾಡಲಿದೆ.

ಈ ನಿರ್ಧಾರಗಳು ರಕ್ಷಣಾ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರತ ಕೇವಲ ಗ್ರಾಹಕ ದೇಶವಾಗಿರದೆ, ಜಗತ್ತಿಗೆ ತಂತ್ರಜ್ಞಾನ ನೀಡುವ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿರುವುದನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *