ಬೆಳಗಾವಿ, ಜುಲೈ 7: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಳವಾಗುತ್ತಿದೆ. ಪ್ರಸ್ತುತ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿದುಬರುತ್ತಿದ್ದು, ನದಿ ತನ್ನ ದಂಡೆಯನ್ನು ಮೀರಿ ಹೊರಭಾಗದಲ್ಲಿ ಹರಿಯುತ್ತಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ ಮತ್ತು ಅಂಕಲಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದೆ. ಕೇವಲ ಐದು ದಿನಗಳ ಹಿಂದೆ ಬರಡಾಗಿದ್ದ ಈ ಪ್ರದೇಶವು ಈಗ ಜಲಾವೃತವಾಗಿದೆ. ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಮುಳುಗಿ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ. ಘಟಪ್ರಭಾ ನದಿಗೆ 22,000 ಕ್ಯೂಸೆಕ್ ಹಾಗೂ ಮಲಪ್ರಭಾ ನದಿಗೆ 5,000 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಹಿಡಕಲ್ ಮತ್ತು ನವಿಲು ತೀರ್ಥ ಜಲಾಶಯಗಳ ನೀರಿನ ಸಂಗ್ರಹ ಮಟ್ಟವೂ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಮುಂದುವರಿದರೆ, ಕೃಷ್ಣಾ ನದಿಯ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ರೈತರಲ್ಲಿ ಆತಂಕ ಮನೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ