ವಿವಾದದ ಜೊತೆಜೊತೆಯಲ್ಲೇ ‘ಕರಾವಳಿ’ ಟ್ರೇಲರ್ (Karavali Trailer) ಬಿಡುಗಡೆ ಆಗಿದೆ. ಸೆಟ್ಟೇರಿದ ದಿನದಿಂದಲೇ ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾದ ಟ್ರೇಲರ್ ನೋಡಲು ಪ್ರೇಕ್ಷಕರು ಕಾದಿದ್ದರು. ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ. ಶೆಟ್ಟಿ, ರಮೇಶ್ ಇಂದಿರ ಮುಂತಾದವರು ನಟಿಸಿರುವ ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ಮಾಡಲಾಗಿದೆ. ಈಗ ಯೂಟ್ಯೂಬ್ನಲ್ಲೂ ಟ್ರೇಲರ್ ಲಭ್ಯವಾಗಿದೆ. ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಜುಲೈ 24ಕ್ಕೆ ತೆರೆಗೆ ಬರುತ್ತಿದೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ರಾಜ್ ಬಿ. ಶೆಟ್ಟಿ, ನಾಯಕಿಯರಾದ ಸಂಪದಾ, ಸುಷ್ಮಿತಾ, ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು. ಆದರೆ ಪ್ರಜ್ವಲ್ ದೇವರಾಜ್ ಅವರು ಭಾಗಿಯಾಗಿರಲಿಲ್ಲ. ಟ್ರೇಲರ್ನಲ್ಲಿ ಕರಾವಳಿ ಸಂಸ್ಕೃತಿ ಜೊತೆಗೆ ಕಂಬಳವೇ ಹೈಲೈಟ್ ಆಗಿದೆ. ಕರಾವಳಿ ಭಾಗದ ಹೆಮ್ಮೆಯ ಕ್ರೀಡೆ ಕಂಬಳವನ್ನು ಸುಂದರವಾಗಿ ಈ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ.
380 ಕೋಣಗಳನ್ನು ಬಳಸಿ ಸಿನಿಮಾ ಶೂಟಿಂಗ್:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ ಅವರು ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೇ, ಸಂಭಾವನೆ ವಿಚಾರದ ಬಗ್ಗೆಯೂ ಮಾತನಾಡಿದರು. ಸುಮಾರು 380 ಕೋಣಗಳನ್ನು ಬಳಸಿ ಸಿನಿಮಾ ಶೂಟಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡರು. ರಾಜ್ ಬಿ. ಶೆಟ್ಟಿ ಮಾತನಾಡಿ, ಇದು ಅಪ್ಪಟ ಕನ್ನಡದ ಸಿನಿಮಾ ಎಂದು ಹೇಳಿದರು.
ಪ್ರಜ್ವಲ್ ದೇವರಾಜ್ ಇನ್ನೂ ಸ್ಪಷ್ಟನೆ ನೀಡಿಲ್ಲ:
ಮಿತ್ರ, ಸಂಪದಾ ಮತ್ತು ಸುಷ್ಮಿತಾ ಕೂಡ ತಮ್ಮ ಪಾತ್ರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಖುಷಿ ವ್ಯಕ್ತಪಡಿಸಿದರು. ಹಿರಿಯ ನಟ ಶ್ರೀಧರ್, ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಛಾಯಾಗ್ರಾಹಕ ಅಭಿಮನ್ಯು ಸದಾನಂದನ್, ವಿತರಕ ಸುಪ್ರಿತ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು. ಟ್ರೇಲರ್ನಲ್ಲಿ ತಮ್ಮ ಧ್ವನಿ ಇಲ್ಲದೇ ಇರುವುದರ ಬಗ್ಗೆ ಪ್ರಜ್ವಲ್ ದೇವರಾಜ್ ಅವರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ: ಇದೇ ಕಾರಣಕ್ಕೆ ಕನ್ನಡ ಚಿತ್ರರಂಗ ಉದ್ದಾರ ಆಗಲ್ಲ: ‘ಕರಾವಳಿ’ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ
‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ವಿತರಣೆ:
ಗುರುದತ್ ಗಾಣಿಗ ಅವರು ‘ಕರಾವಳಿ’ ಸಿನಿಮಾಗೆ ನಿರ್ದೇಶನದ ಜೊತೆಗೆ ‘ವಿಕೆ ಫಿಲ್ಮ್’ ಮತ್ತು ‘ಗಾಣಿಗ ಫಿಲ್ಮ್ಸ್’ ಸಹಯೋಗದಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ. ಟ್ರೇಲರ್ ನೋಡಿದ ಬಳಿಕ ಈ ಸಿನಿಮಾದಲ್ಲಿ ಪ್ರಜ್ವಲ್ ಮತ್ತು ರಾಜ್ ಬಿ. ಶೆಟ್ಟಿ ನಡುವಿನ ಸಂಬಂಧವೇನು ಎಂಬ ಕುತೂಹಲ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.