Headlines

ಪವನ್ ಕಲ್ಯಾಣ್ ಮೆಚ್ಚಿನ ಬಾಲ ಅಭಿಮಾನಿ ನಿರಂಜನ್ ನಿಧನ – Kannada News | Pawan Kalyan’s favourite fan Niranjan passed away

ಆಂಧ್ರ ಪ್ರದೇಶ ಡಿಸಿಎಂ ಮತ್ತು ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಅವರಿಗೆ ಭಾರಿ ದೊಡ್ಡ ಅಭಿಮಾನಿ ವರ್ಗವಿದೆ. ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲದಿದ್ದರೂ ಸಹ ಅವರ ಅಭಿಮಾನಿಗಳು ಪ್ಯಾನ್ ಇಂಡಿಯಾ ಪೂರ್ತಿ ಇದ್ದಾರೆ. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಪವನ್ ಸಹ ಒಬ್ಬರು. ಪವನ್ ಕಲ್ಯಾಣ್ ಸಹ ಖುದ್ದು ತಮ್ಮ ಅಭಿಮಾನಿಗಳ ಬಗ್ಗೆ ಗೌರವ, ಆದರ ಇರಿಸಿಕೊಂಡಿದ್ದಾರೆ. ಅವರ ರಾಜಕೀಯ ಯಶಸ್ಸಿನಲ್ಲಿ ಅಭಿಮಾನಿಗಳ ಪಾಲೂ ಸಹ ಇದೆ. ಆದರೆ ಪವನ್ ಅವರಿಗೆ ಬಲು ಇಷ್ಟವಾಗಿದ್ದ ಬಾಲ ಅಭಿಮಾನಿಯೊಬ್ಬ ಇದೀಗ ನಿಧನ ಹೊಂದಿದ್ದಾನೆ. ಇದು ಪವನ್ ಅವರಿಗೆ ಸೇರಿದಂತೆ ಅವರ ಅಭಿಮಾನಿ ಬಳಗಕ್ಕೆ ತೀವ್ರ ದುಃಖ ತಂದಿದೆ.

ಅಪರೂಪದ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಬಾಲಕ ನಿರಂಜನ್ ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿ ಆಗಿದ್ದ. ಹಾಸಿಗೆ ಹಿಡಿದಿದ್ದರೂ ಸಹ ಪವನ್ ಅವರ ಸಿನಿಮಾಗಳನ್ನು ನೋಡುವುದು, ಅವರ ಚಿತ್ರಗಳನ್ನು ಸಂಗ್ರಹಿಸುವುದು ಬಾಲಕನ ಹವ್ಯಾಸವಾಗಿತ್ತು. ಪವನ್ ಅವರು ಸಹ ಒಮ್ಮೆ ಖುದ್ದಾಗಿ ನಿರಂಜನ್ ಮನೆಗೆ ಭೇಟಿಯಾಗಿ ಬಾಲಕನೊಡನೆ ಸಾಕಷ್ಟು ಸಮಯ ಕಳೆದಿದ್ದರು, ಆತನೊಟ್ಟಿಗೆ ಹಾಸ್ಯ ಮಾಡುತ್ತಾ, ಮುಟ್ಟಿ ಮುದ್ದಾಡಿ ಧೈರ್ಯ ತುಂಬುವ ಕಾರ್ಯವನ್ನ ಮಾಡಿದ್ದರು. ಪವನ್ ಅವರ ಈ ಕಾರ್ಯ ಕೋಟ್ಯಂತರ ಜನರ ಮೆಚ್ಚುಗೆ ಗಳಿಸಿತ್ತು. ಆದರೆ ಈಗ ಆ ಬಾಲಕ ನಿಧನ ಹೊಂದಿದ್ದಾನೆ.

ಇದನ್ನೂ ಓದಿ:ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್

ಕೆಲ ವಾರಗಳ ಹಿಂದಷ್ಟೆ ಹನುಮಕೊಂಡದಲ್ಲಿರುವ ನಿರಂಜನ್ ಅವರ ಮನೆಗೆ ಪವನ್ ಕಲ್ಯಾಣ್ ಭೇಟಿ ನೀಡಿದ್ದರು. ತನ್ನ ಮೆಚ್ಚಿನ ನಟನನ್ನು ಕಾಣಬೇಕು ಎಂಬುದು ಬಾಲಕನ ಆಸೆಯಾಗಿತ್ತು. ಆಸೆ ಈಡೇರಿಸಿದ ಪವನ್ ಕಲ್ಯಾಣ್, ನಿರಂಜನ್​​ಗೆ ತಿರುಪತಿ ಪ್ರಸಾದ ನೀಡಿದ್ದರು, ನಿರಂಜನ್ ಪೋಷಕರೊಟ್ಟಿಗೆ ಮಾತನಾಡಿ, ಆರ್ಥಿಕ ಸಹಾಯವನ್ನು ಸಹ ನೀಡಿದ್ದರು. ಮಾತ್ರವಲ್ಲದೆ, ತಿರುಪತಿ ದೇವಸ್ಥಾನದಲ್ಲಿ ಬಾಲಕನ ಚೇತರಿಕೆಗಾಗಿ ಪ್ರಾರ್ಥಿಸಿದ್ದರು, ಬಾಲಕನ ಹೆಸರಿನ ಮೇಲೆ ಅರ್ಚನೆಗಳನ್ನು ಖುದ್ದು ಪವನ್ ಕಲ್ಯಾಣ್ ಮಾಡಿದ್ದರು. ತಮ್ಮ ಅಭಿಮಾನಿಗಳು ಸಹ ನಿರಂಜನ್​​ಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದರು. ಆದರೆ ಅವರ ಪ್ರಾರ್ಥನೆ ಫಲಿಸಿಲ್ಲ ನಿರಂಜನ್ ಇದೀಗ ನಿಧನ ಹೊಂದಿದ್ದಾರೆ.

ನಿರಂಜನ್, ಸಾವಿನ ಹೊಸ್ತಿಲಲ್ಲಿದ್ದರೂ ನಗುತ್ತಾ, ಚುರುಕಾಗಿ ಮಾತನಾಡುತ್ತಾ ಇದ್ದ ರೀತಿ, ಪವನ್ ಅವರೊಟ್ಟಿಗೆ ಆ ಬಾಲಕ ಆತ್ಮವಿಶ್ವಾಸದಿಂದ ಮಾತನಾಡಿ, ಕಳೆದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಎಲ್ಲರೂ ಸಹ ನಿರಂಜನ್ ಧೈರ್ಯದ ಬಗ್ಗೆ, ಆ ಬಾಲಕನ ಜೀವನ ಪ್ರೀತಿಯನ್ನು ಕೊಂಡಾಡಿದ್ದರು. ಆದರೆ ಈಗ ಬಾಲಕ ಇಹಲೋಕ ತ್ಯಜಿಸಿದ್ದಾನೆ. ಆ ಮೂಲಕ ಪವನ್ ಅವರಿಗೆ ಪ್ರಿಯವಾಗಿದ್ದ ಅಭಿಮಾನಿ ಕಾಲವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *