ವಿಂಬಲ್ಡನ್ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ 39 ವರ್ಷದ ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಭರ್ಜರಿ ಜಯ ಸಾಧಿಸಿದ್ದಾರೆ. ಲಂಡನ್ನ ಪ್ರಸಿದ್ಧ ಸೆಂಟರ್ ಕೋರ್ಟ್ನಲ್ಲಿ ನಡೆದ ಈ ರಣರೋಚಕ ಹಣಾಹಣಿಯಲ್ಲಿ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮೆ ಹಾಗೂ ನೊವಾಕ್ ಜೊಕೊವಿಚ್ ಮುಖಾಮುಖಿಯಾಗಿದ್ದರು. ಈ ಮುಖಾಮುಖಿಯು ಬರೋಬ್ಬರಿ 5 ಗಂಟೆ, 15 ನಿಮಿಷಗಳ ಕಾಲ ನಡೆದಿದ್ದು ವಿಶೇಷ. ಈ ಸುದೀರ್ಘ ಹೋರಾಟದೊಂದಿಗೆ ನೊವಾಕ್ ವಿಂಬಲ್ಡನ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜೊಕೊವಿಚ್ ಪರಾಕ್ರಮ:
ವಿಶ್ವ ರ್ಯಾಂಕಿಂಗ್ನಲ್ಲಿ 4 ನೇ ಸ್ಥಾನದಲ್ಲಿರುವ ಫೆಲಿಕ್ಸ್ ಆಗರ್-ಅಲಿಯಾಸಿಮೆ ವಿರುದ್ಧ 8ನೇ ಶ್ರೇಯಾಂಕಿತರಾಗಿರುವ ನೊವಾಕ್ ಜೊಕೊವಿಚ್ ಏನು ಮಾಡಲಿದ್ದಾರೆ? ಎಂಬ ಕುತೂಹಲ ಎಲ್ಲರಲ್ಲಿತ್ತು. ಏಕೆಂದರೆ ಈ ಪಂದ್ಯವನ್ನು ಯಂಗ್ ಬ್ಲಡ್ ವರ್ಸಸ್ ಎಕ್ಸ್ಪಿರಿಯೆನ್ಸ್ ಎಂದು ಬಿಂಬಿಸಲಾಗಿತ್ತು. ಅದರಂತೆ ಶುರುವಾದ ಈ ಪಂದ್ಯದಲ್ಲಿ ಫೆಲಿಕ್ಸ್ ತಮ್ಮ ಬಿಸಿರಕ್ತವನ್ನು ಬೆವರಾಗಿಸಿದರೆ, ಜೊಕೊವಿಚ್ ಅನುಭವವನ್ನು ಧಾರೆಯೆರದರು. ಪರಿಣಾಮ ಹೋರಾಟವು 5 ಗಂಟೆ 15 ನಿಮಿಷಗಳವರೆಗೆ ಸಾಗಿತು.
ಇದಾಗ್ಯೂ 39 ವರ್ಷದ ನೊವಾಕ್ ಜೊಕೊವಿಚ್ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅಂತಿಮವಾಗಿ ಜೊಕೊವಿಚ್ ಟ್ರೈಬೆಕರ್ನಲ್ಲಿ ಸತತ 6 ಪಾಯಿಂಟ್ಗಳನ್ನು ಗೆದ್ದು 10-4 ರಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ವಿಂಬಲ್ಡನ್ ಇತಿಹಾಸದಲ್ಲೇ ಸುದೀರ್ಘ ಅವಧಿಯ ಕ್ವಾರ್ಟರ್ ಫೈನಲ್ ಆಡಿದ ಹೊಸ ದಾಖಲೆ ಬರೆದರು.
- ಅಂತಿಮ ಸ್ಕೋರ್: 7-6 (12-10), 3-6, 6-3, 6-7 (4-7), 7-6 (10-4)
- ಒಟ್ಟು ಸಮಯ: 5 ಗಂಟೆ, 15 ನಿಮಿಷಗಳು.
- ರೋಚಕಅಂತ್ಯ: ಅಂತಿಮ ಸೆಟ್ನ ಸೂಪರ್ ಟೈ-ಬ್ರೇಕರ್ನಲ್ಲಿ 4-4 ರ ಸಮಬಲವಿದ್ದಾಗ, ಜೊಕೊವಿಕ್ ಸತತ 6 ಪಾಯಿಂಟ್ಗಳನ್ನು ಗೆದ್ದು 10-4 ರಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಜೊಕೊವಿಕ್ ಬರೆದ ಹೊಸ ದಾಖಲೆಗಳು!
ಈ ಗೆಲುವಿನೊಂದಿಗೆ ನೊವಾಕ್ ಜೊಕೊವಿಚ್ ಟೆನಿಸ್ ಇತಿಹಾಸದ ಪುಟಗಳಲ್ಲಿ ಮತ್ತಷ್ಟು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ:
- ಅತಿ ಹಿರಿಯ ಆಟಗಾರ: 39 ವರ್ಷದ ನೊವಾಕ್ ಜೊಕೊವಿಚ್, 1974ರ ನಂತರ ವಿಂಬಲ್ಡನ್ ಸೆಮಿ-ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
- 15ನೇ ಸೆಮಿ-ಫೈನಲ್: ವಿಂಬಲ್ಡನ್ನಲ್ಲಿ ದಾಖಲೆಯ 15ನೇ ಬಾರಿಗೆ ಸೆಮಿ-ಫೈನಲ್ ತಲುಪಿದ ವಿಶೇಷ ದಾಖಲೆಯನ್ನೂ ಕೂಡ ಜೊಕೊವಿಚ್ ತಮ್ಮದಾಗಿಸಿಕೊಂಡಿದ್ದಾರೆ.
- 107ನೇ ಗೆಲುವು: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್ ತಮ್ಮ ಒಟ್ಟು ಗೆಲುವಿನ ಸಂಖ್ಯೆಯನ್ನು 107ಕ್ಕೆ ಏರಿಸಿಕೊಂಡಿದ್ದಾರೆ.
ಸವಾಲುಗಳನ್ನು ಮೆಟ್ಟಿ ನಿಂತ ದಿಗ್ಗಜ!
ಈ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಅವರಿಗೆ ಜಯ ಸುಲಭವಾಗಿ ದಕ್ಕಿರಲಿಲ್ಲ. ಮೊದಲ ಸೆಟ್ನಲ್ಲಿಯೇ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾದ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕಾಯಿತು. ಇದಲ್ಲದೆ, ಎರಡನೇ ಸೆಟ್ ನಂತರ ಕೋರ್ಟ್ನ ಮೇಲ್ಛಾವಣಿಯನ್ನು ಮುಚ್ಚುವ ಅಧಿಕಾರಿಗಳ ನಿರ್ಧಾರದ ಬಗ್ಗೆಯೂ ಜೊಕೊವಿಕ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಇವೆಲ್ಲದರ ಮಧ್ಯೆ 25 ವರ್ಷದ ಯುವ ಆಟಗಾರ ಆಗರ್-ಅಲಿಯಾಸಿಮೆ ಬರೋಬ್ಬರಿ 29 ಏಸ್ ಸರ್ವ್ಗಳನ್ನು ಸಿಡಿಸಿ ಜೊಕೊವಿಕ್ಗೆ ಪ್ರಬಲ ಪೈಪೋಟಿ ನೀಡಿದರು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಗೆಲ್ಲುವಲ್ಲಿ “ನೋಲೆ” ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
ಸೆಮಿಫೈನಲ್ ಎದುರಾಳಿ ಯಾರು?
ಈ ಸುದೀರ್ಘ ಪಂದ್ಯದ ಬಳಿಕ ನೊವಾಕ್ ಜೊಕೊವಿಚ್ ಅವರಿಗೆ ಎರಡು ದಿನಗಳ ವಿಶ್ರಾಂತಿ ಸಿಗಲಿದೆ. ಬರುವ ಶುಕ್ರವಾರ ನಡೆಯಲಿರುವ ಹೈ-ವೋಲ್ಟೇಜ್ ಸೆಮಿ-ಫೈನಲ್ ಪಂದ್ಯದಲ್ಲಿ ಅವರು ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಯಾನಿಕ್ ಸಿನರ್ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ಸವಾಲಿನಲ್ಲಿ ಗೆದ್ದರೆ ನೊವಾಕ್ ಜೊಕೊವಿಚ್ ಮತ್ತೊಂದು ಫೈನಲ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.