ಸಮಂತಾ ಋತ್ ಪ್ರಭು (Samantha Ruth Prabhu), ದಕ್ಷಿಣದ ಸ್ಟಾರ್ ನಟಿ. ಕಳೆದ ವರ್ಷವಷ್ಟೆ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆಗಿವೆ ಎಂದಿದ್ದರು. ಹಲವು ಸಿನಿ ಪಂಡಿತರು ಸಹ ಚಿತ್ರರಂಗದಲ್ಲಿ ಸಮಂತಾರ ‘ಸಮಯ’ ಮುಗಿಯಿತು ಎಂದು ಷರಾ ಬರೆದಿದ್ದರು. ಆದರೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ಸಮಂತಾ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಅದು ಯಾವ ಮಟ್ಟಿಗೆಂದರೆ ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ.
ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ 100 ಕೋಟಿ ಕಲೆಕ್ಷನ್ ಹೊಸ್ತಿನಲ್ಲಿದೆ. ಸಿನಿಮಾ ಈಗಾಗಲೇ ವಿಶ್ವದಾದ್ಯಂತ 98 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ಒಂದು 100 ಕೋಟಿ ಗಳಿಸುವುದು ದೊಡ್ಡ ಸಾಧನೆಯಲ್ಲ, ಆದರೆ ಮಹಿಳಾ ಪ್ರಧಾನ ಸಿನಿಮಾ ಒಂದು 100 ಕೋಟಿ ಗಳಿಸುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದು ಕೇವಲ ಎರಡನೇ ಭಾರಿ ನಡೆಯುತ್ತಿರುವ ವಿದ್ಯಮಾನ.
ಈ ಹಿಂದೆ ಅನುಷ್ಕಾ ಶೆಟ್ಟಿ ನಟನೆಯ ‘ರುದ್ರಮ್ಮದೇವಿ’ ಮತ್ತು ಅದಕ್ಕೂ ಹಿಂದಿನ ‘ಅರುಂಧತಿ’ ಸಿನಿಮಾಗಳು ದೊಡ್ಡ ಮೊತ್ತದ ಗಳಿಕೆ ಮಾಡಿದ್ದವು. ‘ರುದ್ರಮ್ಮದೇವಿ’ ಸಿನಿಮಾ 86 ಕೋಟಿ ಗಳಿಸಿದ್ದರೆ, ‘ಅರುಂಧತಿ’ 2009ರಲ್ಲೇ 75 ಕೋಟಿ ಬಾಚಿತ್ತು. ಕೀರ್ತಿ ಸುರೇಶ್ ನಟಿಸಿದ್ದ ಮಹಿಳಾ ಪ್ರಧಾನ ಸಿನಿಮಾ ‘ಮಹಾನಟಿ’ ಸಹ 90 ಕೋಟಿ ಗಳಿಕೆಗೆ ಹತ್ತಿರವಾಗಿತ್ತು. ಈ ಮೂರೂ ಸಿನಿಮಾಗಳು ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿ ಮಹಿಳಾ ಪ್ರಧಾನ ಸಿನಿಮಾಗಳು ಎನಿಸಿಕೊಂಡಿದ್ದವು. ಆದರೆ ಈಗ ಆ ದಾಖಲೆ ‘ಮಾ ಇಂಟಿ ಬಂಗಾರಂ’ ಖಾತೆ ಸೇರಿದೆ.
ಇದನ್ನೂ ಓದಿ:ಗರ್ಭಿಣಿ ಆಗಿದ್ದರೂ ವರ್ಕೌಟ್ ತಪ್ಪಿಸಲ್ಲ ಸಮಂತಾ: ವಿಡಿಯೋ ನೋಡಿ
ಇನ್ನು ದಕ್ಷಿಣ ಭಾರತದಲ್ಲಿ ಮಹಿಳಾ ಪ್ರಧಾನ ಸಿನಿಮಾ ಒಂದು 100 ಕೋಟಿ ಗಡಿ ದಾಟುತ್ತಿರುವುದು ಇದು ಎರಡನೇ ಭಾರಿ ಆಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಮಲಯಾಳಂ ಸಿನಿಮಾ ‘ಲೋಕಃ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 300 ಕೋಟಿ ಗಳಿಕೆ ಮಾಡಿತ್ತು. ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದ ಆ ಸಿನಿಮಾ, ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿದೆ.
ಏನೇ ಆಗಲಿ, ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ಸಮಂತಾ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾದ ಎರಡನೇ ಭಾಗವೂ ಸಹ ಬರಲಿದೆ ಎಂದು ಈಗಾಗಲೇ ಚಿತ್ರತಂಡ ಹೇಳಿದೆ. ಈ ಸಿನಿಮಾವನ್ನು ಸಮಂತಾರ ಗೆಳತಿ ನಂದಿನಿ ರೆಡ್ಡಿ ಅವರೇ ನಿರ್ದೇಶನ ಮಾಡಿದ್ದರು. ಸಮಂತಾ ಮತ್ತು ಅವರ ಪತಿ ರಾಜ್ ನಿಧಿಮೋರು ಅವರು ಸಿನಿಮಾ ನಿರ್ಮಾಣ ಮಾಡಿದ್ದರು. ಸಿನಿಮಾನಲ್ಲಿ ಸಮಂತಾ ಜೊತೆಗೆ ಕನ್ನಡಿಗರಾದ ದಿಗಂತ್ ಮಂಚಾಲೆ ಮತ್ತು ಗುಲ್ಷನ್ ದೇವಯ್ಯ ಅವರುಗಳು ನಟಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ