ಬೆಂಗಳೂರು, ಜು.10: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಕೋಟ್ಯಾಂತರ ರೂಪಾಯಿ ಹಣವಿದ್ದ ಎಟಿಎಂ ನಗದು ಸಾಗಣೆ ವಾಹನವನ್ನೇ (ATM Cash Van) ಗುರಿಯಾಗಿಸಿಕೊಂಡು ದರೋಡೆಗೆ ಸಂಚು ರೂಪಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಾಹನದಲ್ಲಿದ್ದ ಬರೋಬ್ಬರಿ 1 ಕೋಟಿ 79 ಲಕ್ಷ ರೂಪಾಯಿ ನಗದನ್ನು ದೋಚಲು ಕಿಡಿಗೇಡಿಗಳು ಹೊಂಚು ಹಾಕಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ರಾತ್ರಿ ಎಂದಿನಂತೆ ವಿವಿಧ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸಲು ನಗದು ಸಾಗಣೆ ವಾಹನ ಹೊರಟಿತ್ತು. ಈ ವಾಹನದಲ್ಲಿ ಓರ್ವ ಗನ್ಮ್ಯಾನ್, ಚಾಲಕ ಹಾಗೂ ನಗದು ಜಮಾ ಮಾಡುವ ಸಿಬ್ಬಂದಿ ಇದ್ದರು. ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯ ಬಳಿ ವಾಹನವು ಯೂ-ಟರ್ನ್ (U-Turn) ತೆಗೆದುಕೊಳ್ಳುತ್ತಿದ್ದ ಸಂದರ್ಭವನ್ನು ಹೊಂಚು ಹಾಕಿ ಕಾಯುತ್ತಿದ್ದ ಕಿಡಿಗೇಡಿಗಳು ತಕ್ಷಣವೇ ತಮ್ಮ ಬೈಕ್ ಅನ್ನು ಅಡ್ಡ ನಿಲ್ಲಿಸಿದ್ದಾರೆ. “ನಿಮ್ಮ ಗಾಡಿ ನಮ್ಮ ಬೈಕ್ಗೆ ಟಚ್ ಆಗಿದೆ” ಎಂದು ನಡುರಸ್ತೆಯಲ್ಲೇ ಇಲ್ಲಸಲ್ಲದ ಕಿರಿಕ್ ತೆಗೆದ ಅಸಾಮಿಗಳು, ವಾಹನದ ಸಿಬ್ಬಂದಿಗೆ ತೀವ್ರವಾಗಿ ಅವಾಜ್ ಹಾಕಲು ಶುರು ಮಾಡಿದ್ದಾರೆ.
ಕಿಡಿಗೇಡಿಗಳು ಸೃಷ್ಟಿಸಿದ ರಂಪಾಟ ನೋಡಿ ನಡುರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಜಮಾಯಿಸಲು ಆರಂಭಿಸಿದ್ದಾರೆ. ಸ್ಥಳದಲ್ಲಿ ಜನರು ಹೆಚ್ಚಾಗುತ್ತಿದ್ದಂತೆ ಪ್ಲಾನ್ ಉಲ್ಟಾ ಹೊಡೆಯುವುದನ್ನು ಅರಿತ ಕಿಡಿಗೇಡಿಗಳು, ತಕ್ಷಣವೇ ಚಾಲಕನ ಬಳಿಯಿದ್ದ ಎಟಿಎಂ ವಾಹನದ ಕೀಲಿಕೈಯನ್ನು (Key) ಕಿತ್ತುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ವಾಹನವನ್ನು ಅಲ್ಲಿಯೇ ಲಾಕ್ ಮಾಡಿ, ಗನ್ಮ್ಯಾನ್ ಮತ್ತು ಸಿಬ್ಬಂದಿಯನ್ನು ಅಸಹಾಯಕರನ್ನಾಗಿಸಿ ಹಣ ದೋಚುವುದು ಇವರ ಅಸಲಿ ಪ್ಲಾನ್ ಆಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ದೊಡ್ಡ ಮಟ್ಟದ ದುಷ್ಕೃತ್ಯ ಎಸಗಲು ಸಂಚು ರೂಪಿಸಿಯೇ ಇವರು ವಾಹನವನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೀ ಎಗರಿಸಿ ಪರಾರಿಯಾಗಿರುವ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ