ನವದೆಹಲಿ, ಜುಲೈ 10: ದೇಶದಲ್ಲಿ ಜಾರಿಯಲ್ಲಿರುವ ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮ, ವಿಶೇಷವಾಗಿ E20 ಇಂಧನ (ಶೇ. 20 ಎಥೆನಾಲ್ ಮಿಶ್ರಿತ ಪೆಟ್ರೋಲ್) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಮತ್ತು ತಪ್ಪು ಮಾಹಿತಿಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕಾರ್ಯಕ್ರಮವು ವೈಜ್ಞಾನಿಕವಾಗಿ ಪರೀಕ್ಷಿಸಲ್ಪಟ್ಟಿದ್ದು, ಗ್ರಾಹಕರಿಗೆ ಮತ್ತು ವಾಹನಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ. ಜನಸಾಮಾನ್ಯರ ಕೆಲ ಅತಂಕ, ಸಂದೇಹ ಮತ್ತು ಪ್ರಶ್ನೆಗಳಿಗೆ ಇಲ್ಲಿದೆ ಸರ್ಕಾರದ ಉತ್ತರ (FAQs):
- ಹಳೆಯ ವಾಹನಗಳಿಗೂ ಸುರಕ್ಷಿತ: E20 ಇಂಧನ ಬಳಕೆಯಿಂದ ಹಳೆಯ ವಾಹನಗಳ ಎಂಜಿನ್ ಅಥವಾ ರಬ್ಬರ್ ಭಾಗಗಳಿಗೆ ಹಾನಿಯಾಗುತ್ತದೆ ಎಂಬ ಆತಂಕ ನಿರಾಧಾರವಾಗಿದೆ. ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಕಳೆದ ಆರ್ಥಿಕ ವರ್ಷದಲ್ಲಿ 2.84 ಕೋಟಿ ವಾಹನಗಳಿಗೆ ಸರ್ವಿಸ್ ಮಾಡಿದ್ದು, ಇದರಲ್ಲಿ 1.5 ಕೋಟಿಗೂ ಹೆಚ್ಚು ಹಳೆಯ ವಾಹನಗಳಾಗಿದ್ದರೂ ಎಥೆನಾಲ್‌ನಿಂದ ಯಾವುದೇ ತುಕ್ಕು ಅಥವಾ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
- ವಾಹನ ವಿಮೆ ಮತ್ತು ವಾರಂಟಿ ಸಿಂಧು: E20 ಇಂಧನ ಬಳಕೆಯಿಂದ ವಾಹನಗಳ ವಾರಂಟಿ ಅಥವಾ ಮೋಟಾರ್ ಇನ್ಶೂರೆನ್ಸ್ ಕ್ಲೈಮ್‌ಗಳ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ವಾಹನ ತಯಾರಕರ ಒಕ್ಕೂಟವಾದ ‘ಸಿಯಾಮ್’ (SIAM) ಸಹ ವಾರಂಟಿ ನಿಯಮಗಳು ಎಂದಿನಂತೆ ಮುಂದುವರಿಯಲಿವೆ ಎಂದು ಖಚಿತಪಡಿಸಿದೆ.
- ಇಂಧನ ದಕ್ಷತೆ ಮತ್ತು ಪರಿಸರ ಸೂಕ್ತತೆ: ಎಥೆನಾಲ್ ಮಿಶ್ರಣದಿಂದ ಮೈಲೇಜ್‌ನಲ್ಲಿ ಶೇ. 3 ರಿಂದ 5 ರಷ್ಟು ಮಾತ್ರ ಅತ್ಯಲ್ಪ ವ್ಯತ್ಯಾಸವಾಗಬಹುದು. ಆದರೆ, ಇದು ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿದ್ದು, ವಾಹನಕ್ಕೆ ಉತ್ತಮ ಪಿಕಪ್ ನೀಡುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಶೇ. 40 ರಷ್ಟು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯ ನಿಯಂತ್ರಿಸುತ್ತದೆ.
- ರೈತರಿಗೆ ಮತ್ತು ದೇಶದ ಆರ್ಥಿಕತೆಗೆ ಲಾಭ: ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ ಶೇ. 88.5 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಎಥೆನಾಲ್ ಆಮದು ಅವಲಂಬನೆಯನ್ನು ತಗ್ಗಿಸಿ, ದೇಶಕ್ಕೆ ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯವನ್ನು ಉಳಿಸಿದೆ. ಅಷ್ಟೇ ಅಲ್ಲದೆ, ಕಬ್ಬು ಮತ್ತು ಜೋಳ ಬೆಳೆಯುವ ಭಾರತೀಯ ರೈತರಿಗೆ ನೇರವಾಗಿ ₹1.66 ಲಕ್ಷ ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿದ್ದು, ಅನ್ನದಾತರು ಈಗ ‘ಊರ್ಜಾದಾತ’ರಾಗಿದ್ದಾರೆ.
ಇದನ್ನೂ ಓದಿ: ವಿಶ್ವದ ಹಲವು ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್ ಅಗ್ಗ; ಇದು ಹೇಗೆ ಸಾಧ್ಯವಾಯಿತು? ಸಚಿವ ಹರ್ದೀಪ್ ಸಿಂಗ್ ಪುರಿ ಬಿಚ್ಚಿಟ್ಟ ಸತ್ಯ
ಎಥನಾಲ್ ಮಿಶ್ರಣವಾದರೂ ಬೆಲೆ ಕಡಿಮೆ ಇಲ್ಲ ಯಾಕೆ?
ಇ20 ಇಂಧನದಲ್ಲಿ ಶೇ. 20ರಷ್ಟು ಎಥನಾಲ್ ಮಿಶ್ರಣ ಇರುತ್ತದೆ. ಇ10 ನಲ್ಲಿ ಶೇ. 10 ಎಥನಾಲ್ ಇರುತ್ತದೆ. ಆದರೂ ಯಾಕೆ ಪೆಟ್ರೋಲ್ಗಿಂತ ಎಥನಾಲ್ ಮಿಶ್ರಿತ ಇಂಧನದ ಬೆಲೆ ಕಡಿಮೆ ಇರುವುದಿಲ್ಲ? ಇದಕ್ಕೆ ಕಾರಣ, ಎಥನಾಲ್ ಉತ್ಪಾದಿಸಲು ಪಡೆಯಲಾಗುವ ಕಾಕಂಬಿ, ಕಬ್ಬಿನ ರಸ ಇತ್ಯಾದಿ ಕಚ್ಚಾ ವಸ್ತುಗಳ ಬೆಲೆ. ರೈತರಿಂದ ಇವುಗಳನ್ನು ಹೆಚ್ಚಿನ ಬೆಲೆಗೆ ಪಡೆಯಲಾಗುತ್ತಿದೆ. ಇದರಿಂದಾಗಿ, ಶುದ್ಧ ಪೆಟ್ರೋಲ್ಗಿಂತ ಇದರ ಬೆಲೆ ಕಡಿಮೆ ಆಗಲಾಗುತ್ತಿಲ್ಲ.
ಆದರೆ, ಎಥನಾಲ್ ಇಂಧನದ ಬೆಲೆ ಕಡಿಮೆ ಇರದೇ ಹೋದರೂ, ಅದರಿಂದ ಬಹಳಷ್ಟು ಅನುಕೂಲಗಳಿವೆ. ಪೆಟ್ರೋಲ್ ಆಮದು ಹೊರೆ ತಗ್ಗುತ್ತದೆ. ಇದರಿಂದ ವಿದೇಶೀ ವಿನಿಮಯದ ಒತ್ತಡ ಕಡಿಮೆ ಆಗುತ್ತದೆ. ಪರಿಸರ ಮಾಲಿನ್ಯ ಬಹಳಷ್ಟು ಕಡಿಮೆ ಆಗುತ್ತದೆ. ರೈತರಿಗೆ ಹೆಚ್ಚುವರಿ ಆದಾಯ ಮೂಲ ಸಿಗುತ್ತದೆ.
ವದಂತಿಗಳಿಗೆ ಕಿವಿಗೊಡದಿರಿ ಎಂದ ಸರ್ಕಾರ
“ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಭಾರತದ ಎಥೆನಾಲ್ ಮಿಶ್ರಣ ಪ್ರಕ್ರಿಯೆಯು ಕಠಿಣ ಗುಣಮಟ್ಟದ ಪರಿಶೀಲನೆಗೆ ಒಳಪಟ್ಟಿರುತ್ತದೆ ಮತ್ತು ತೈಲ ಕಂಪನಿಗಳು ಬಿಐಎಸ್ (BIS) ಮಾನದಂಡಗಳ ಅಡಿಯಲ್ಲೇ ಇಂಧನ ಪೂರೈಸುತ್ತಿವೆ” ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ