Headlines

ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ನಂತರವೇ ರಾಷ್ಟ್ರಗೀತೆ ಹಾಡಬೇಕು; ಸರ್ಕಾರದ ಮಹತ್ವದ ಆದೇಶ – Kannada News | Should Use Correct Text and Pronunciation While Singing National Anthem and National Song Centre Orders

ನವದೆಹಲಿ, ಜುಲೈ 11: ರಾಷ್ಟ್ರಗೀತೆಯಾದ ಜನಗಣಮನ ಮತ್ತು ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಕುರಿತಾಗಿ ಕೆಲವು ಮಹತ್ವದ ಆದೇಶಗಳನ್ನು ಹೊರಡಿಸಿದೆ. ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ವಿವಿಧ ಗೀತೆಗಳನ್ನು ಹಾಡುವ ಅಥವಾ ನುಡಿಸುವ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಈ ಸ್ಪಷ್ಟನೆಯನ್ನು ನೀಡಿದೆ. ಇನ್ನು ಮುಂದೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ಹಾಡಬೇಕು ಅಥವಾ ಪ್ಲೇ ಮಾಡಬೇಕು. ಅದರ ನಂತರ ರಾಷ್ಟ್ರಗೀತೆಯಾದ (National Anthem) ಜನಗಣಮನ ಗೀತೆಯನ್ನು ಹಾಡಬೇಕು ಅಥವಾ ಪ್ಲೇ ಮಾಡಬೇಕು ಎಂದು ಆದೇಶಿಸಲಾಗಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲು ರಾಜ್ಯ ಗೀತೆಯನ್ನು ಹಾಡಿ, ನಂತರ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಬೇಕು. ಕರ್ನಾಟಕದಲ್ಲಾದರೆ ಜೈ ಭಾರತ ಜನನಿಯ ತನುಜಾತೆ ಹಾಡಿದ ಬಳಿಕವೇ ವಂದೇ ಮಾತರಂ ಮತ್ತು ಜನಗಣಮನ ಗೀತೆಯನ್ನು ಹಾಡಬೇಕು ಎಂದು ಸೂಚಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಈ ನೂತನ ಆದೇಶವನ್ನು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು (UT) ಮತ್ತು ಕೇಂದ್ರ ಸಚಿವಾಲಯಗಳಿಗೆ ಕಳುಹಿಸಲಾಗಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ರಾಷ್ಟ್ರಗೀತೆಯನ್ನು ಹಾಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಕೂಡ ಸೂಚಿಸಲಾಗಿದೆ.

ಇದನ್ನೂ ಓದಿ:  ಜನಗಣಮನವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ? ಈ ಹಾಡಿನ ಅರ್ಥವೇನು?

ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಬಳಿಕವೇ ರಾಷ್ಟ್ರಗೀತೆಯನ್ನು ಹಾಕಬೇಕು. ಯಾವಾಗಲೆಲ್ಲಾ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಬಳಸಲಾಗುತ್ತದೆಯೋ, ಆಗ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಎರಡನ್ನೂ ಜೊತೆಯಾಗಿಯೇ ಪ್ಲೇ ಮಾಡಬೇಕು. ಆದರೆ ಮೊದಲು ರಾಷ್ಟ್ರೀಯ ಗೀತೆ ಬರಬೇಕು, ನಂತರವೇ ರಾಷ್ಟ್ರಗೀತೆ ಬರಬೇಕು” ಎಂದು ಗೃಹ ಸಚಿವಾಲಯ (MHA) ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸರಿಯಾದ ಸಾಹಿತ್ಯ ಮತ್ತು ಉಚ್ಚಾರಣೆ:

ಕೇಂದ್ರ ಸರ್ಕಾರವು ಈ ಆದೇಶದಲ್ಲಿ ಕೇವಲ ಕ್ರಮವನ್ನು ಮಾತ್ರವಲ್ಲದೆ, ಗೀತೆಗಳನ್ನು ಹಾಡುವ ಗುಣಮಟ್ಟದ ಕಡೆಗೂ ಗಮನ ಹರಿಸಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಅದರ ಮೂಲ ಸಾಹಿತ್ಯ ಹಾಗೂ ಉಚ್ಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ತಪ್ಪುಗಳಾಗಬಾರದು ಎಂದು ಸರ್ಕಾರ ಹೇಳಿದೆ.

ಅಧಿಕಾರಿಗಳು ಮತ್ತು ಸಂಸ್ಥೆಗಳ ನೆರವಿಗಾಗಿ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಅಧಿಕೃತ ಸಾಹಿತ್ಯ ಹಾಗೂ ಅದರ ಸರಿಯಾದ ಉಚ್ಚಾರಣೆಯ ಮಾರ್ಗದರ್ಶನವನ್ನು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಸಂದರ್ಭಗಳ ಸಮಗ್ರ ಪಟ್ಟಿ ಬಿಡುಗಡೆ:

ಹಾಗೆಯೇ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯನ್ನು ಯಾವೆಲ್ಲಾ ಸಂದರ್ಭಗಳಲ್ಲಿ ಕಡ್ಡಾಯವಾಗಿ ಹಾಡಬೇಕು ಅಥವಾ ನುಡಿಸಬೇಕು, ಯಾವ ಸಂದರ್ಭಗಳಲ್ಲಿ ಹಾಡಲೇಬೇಕೆಂಬ ಕಡ್ಡಾಯ ನಿಯಮವಿಲ್ಲ ಎಂಬುದರ ಸಂಪೂರ್ಣ ಮತ್ತು ಸಮಗ್ರ ಪಟ್ಟಿಯನ್ನು ಗೃಹ ಸಚಿವಾಲಯದ ನಿಯಮಾವಳಿಗಳು ಒಳಗೊಂಡಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಎಲ್ಲಾ ಮದರಸಾಗಳಲ್ಲಿ ಇನ್ನುಮುಂದೆ ವಂದೇ ಮಾತರಂ ಹಾಡುವುದು ಕಡ್ಡಾಯ

ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ಸರ್ಕಾರಿ ಅಧಿಕೃತ ಸಮಾರಂಭಗಳಿಗೆ ರಾಷ್ಟ್ರಪತಿಗಳ ಆಗಮನ ಮತ್ತು ಅವರ ನಿರ್ಗಮನದ ಸಮಯದಲ್ಲಿ, ದೂರದರ್ಶನ ಮತ್ತು ಆಕಾಶವಾಣಿ ಮೂಲಕ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಮಾತನಾಡುವ ಮುನ್ನ ಮತ್ತು ಮಾತನಾಡಿದ ನಂತರ ರಾಷ್ಟ್ರಗೀತೆಯನ್ನು ಹಾಕುವುದು ಕಡ್ಡಾಯ. ಹಾಗೇ, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಅಧಿಕೃತ ಸಮಾರಂಭಗಳಿಗೆ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಮಿಸುವಾಗ ಹಾಗೂ ನಿರ್ಗಮಿಸುವಾಗಲೂ ಕಡ್ಡಾಯ. ಪರೇಡ್ ಸಮಯದಲ್ಲಿ ರಾಷ್ಟ್ರಧ್ವಜವನ್ನು ತರುವಾಗ, ಭಾರತ ಸರ್ಕಾರವು ವಿಶೇಷ ಆದೇಶ ಹೊರಡಿಸುವ ಇತರೆ ಯಾವುದೇ ಸಂದರ್ಭಗಳಲ್ಲಿ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಕಡ್ಡಾಯವಾಗಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಇಡೀ ಸಭೆಯು ಸಾವಧಾನ (ಅಟೆನ್ಷನ್) ಸ್ಥಿತಿಯಲ್ಲಿ ನಿಲ್ಲಬೇಕು.

ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳಿಗೆ ಈ ನೂತನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:02 pm, Sat, 11 July 26

Source link

Leave a Reply

Your email address will not be published. Required fields are marked *