ಬೆಂಗಳೂರು ಟ್ರಾಫಿಕ್ ಕಿರಿಕಿರಿImage Credit source: Hindustan Times
ಬೆಂಗಳೂರು, ಜುಲೈ 12: ನಗರದ ಟ್ರಾಫಿಕ್ ಸಮಸ್ಯೆ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ನಡುವಿನ ದೂರದ ಬಗೆಗಿನ ಚರ್ಚೆಗಳು ಜಾಲತಾಣಗಳಲ್ಲಿ ಹೊಸದೇನಲ್ಲ. ಆದರೆ, ಇತ್ತೀಚೆಗೆ ಮನೀಶ್ ಕುಮಾರ್ ಸಿಂಗ್ ಎಂಬ ಪ್ರಯಾಣಿಕರೊಬ್ಬರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ಏರ್‌ಪೋರ್ಟ್ ತಲುಪಲು ತಗಲುವ ಸಮಯ, ಬೆಂಗಳೂರಿನಿಂದ ಕೋಲ್ಕತ್ತಾ ತಲುಪುವ ಫ್ಲೈಟ್ ಪ್ರಯಾಣದ ಸಮಯಕ್ಕಿಂತಲೂ ಹೆಚ್ಚಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಕೋಲ್ಕತ್ತಾ ವಿಮಾನ ಪ್ರಯಾಣಕ್ಕಿಂತ ಏರ್‌ಪೋರ್ಟ್ ರಸ್ತೆಯೇ ದೀರ್ಘ!
ಮನೀಶ್ ಕುಮಾರ್ ಸಿಂಗ್ ಅವರು ಕೋಲ್ಕತ್ತಾಗೆ ತೆರಳಲು ಎಚ್‌ಎಸ್‌ಆರ್ ಲೇಔಟ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಈ ಇನ್‌ಸ್ಟಾಗ್ರಾಮ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು, ನಮ್ಮ ದೇಶದ ಕಳಪೆ ನಗರಾಭಿವೃದ್ಧಿ ಯೋಜನೆಯಿಂದಾಗಿ ಜನರು ತಮ್ಮ ಅಮೂಲ್ಯ ಸಮಯವನ್ನು ಎಷ್ಟು ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯ ಹಾಗೂ ತಮಾಷೆ ಎನಿಸಬಹುದು ಎಂದಿದ್ದಾರೆ.
ಬೆಂಗಳೂರು ನಗರದಿಂದ ವಿಮಾನ ನಿಲ್ದಾಣವನ್ನು ತಲುಪಲು ಸದ್ಯ ಎರಡೂವರೆಯಿಂದ ಮೂರು ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ಆದರೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಇರುವ ಫ್ಲೈಟ್ ಜರ್ನಿಯ ಸಮಯ ಕೇವಲ 2 ಗಂಟೆ 20 ನಿಮಿಷಗಳು ಮಾತ್ರ. ನಾನು ಎಚ್‌ಎಸ್‌ಆರ್ ಲೇಔಟ್‌ನಿಂದ ಏರ್‌ಪೋರ್ಟ್ ತಲುಪಲು ತೆಗೆದುಕೊಂಡ ಸಮಯವು, ನಾನು ಬೆಂಗಳೂರಿನಿಂದ ವಿಮಾನದ ಮೂಲಕ ಕೋಲ್ಕತ್ತಾ ತಲುಪಲು ತೆಗೆದುಕೊಳ್ಳುವ ಸಮಯಕ್ಕಿಂತ ಹೆಚ್ಚಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗಲು ಇಷ್ಟೊಂದು ಸಮಯ ವ್ಯಯಿಸುವಂತೆ ನಗರವನ್ನು ಯೋಜಿಸಬೇಕಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅಂತರರಾಷ್ಟ್ರೀಯ ನಗರಗಳ ಜೊತೆ ಹೋಲಿಕೆ
ನ್ಯೂಯಾರ್ಕ್ ಮತ್ತು ಚಿಕಾಗೋದಂತಹ ಜಾಗತಿಕ ಮೆಟ್ರೋಪಾಲಿಟನ್ ನಗರಗಳನ್ನು ಉದಾಹರಿಸಿದ ಮನೀಶ್, ಆ ನಗರಗಳು ವಿಸ್ತಾರವಾಗಿದ್ದರೂ ಸಹ ಅಲ್ಲಿನ ಅತ್ಯುತ್ತಮ ಕನೆಕ್ಟಿವಿಟಿಯಿಂದಾಗಿ ಜನರು ನಗರದ ಯಾವುದೇ ಮೂಲೆಯಿಂದ 30 ರಿಂದ 40 ನಿಮಿಷಗಳಲ್ಲಿ ಏರ್‌ಪೋರ್ಟ್ ತಲುಪಬಹುದು ಎಂದಿದ್ದಾರೆ. ಆದರೆ ನಮ್ಮಲ್ಲಿ ಮೊದಲು ವಿಮಾನ ನಿಲ್ದಾಣವನ್ನು ನಿರ್ಮಿಸಿ, ನಂತರ ಅಲ್ಲಿಗೆ ಜನ ತಲುಪುವುದು ಹೇಗೆ ಎಂದು ಯೋಚಿಸುತ್ತಾರೆ. ಇದು ಸಂಪೂರ್ಣ ಉಲ್ಟಾ ಯೋಜನೆಯಾಗಿದೆ ಎಂದು ಅವರು ದೂರಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ನಾವು ಏನನ್ನು ನಿರ್ಮಿಸುತ್ತಿದ್ದೇವೆ? ಒಂದು ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗುವಷ್ಟರಲ್ಲಿ 2,000 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ನಗರಕ್ಕೆ ಫ್ಲೈಟ್‌ನಲ್ಲಿ ಹೋಗಿ ತಲುಪಬಹುದು ಎಂದರೆ ಇದು ಎಷ್ಟು ವಿಚಿತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಸಹಮತ
ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾವಿರಾರು ಬೆಂಗಳೂರಿಗರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದು ನೂರಕ್ಕೆ ನೂರು ನಿಜ. ಏರ್‌ಪೋರ್ಟ್‌ಗೆ ಮೂರು ಗಂಟೆ ಮುಂಚಿತವಾಗಿ ಪ್ರಯಾಣ ಆರಂಭಿಸಬೇಕು, ಜೊತೆಗೆ ಅಲ್ಲಿ ಎರಡು ಗಂಟೆ ಮುಂಚಿತವಾಗಿ ಇರಬೇಕು. ಒಟ್ಟಾರೆ ವಿಮಾನ ಹತ್ತುವಷ್ಟರಲ್ಲೇ ಇಡೀ ದಿನದ ಶಕ್ತಿ ಮುಗಿದುಹೋಗಿರುತ್ತದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ