ತಾಜ್ ಮಹಲ್ ಪ್ಯಾಲೇಸ್ ಹೋಟೆಲ್Image Credit source: PTI
ಮುಂಬೈ, ಜುಲೈ 12: ನಿನ್ನೆ ದೆಹಲಿಯ ಕೆಂಪು ಕೋಟೆಯ ಮೇಲೆ ಹುಸಿ ಬಾಂಬ್ ಬೆದರಿಕೆ ಬಂದಂತೆ ಇವತ್ತು ಮುಂಬೈನ ಐತಿಹಾಸಿಕ ಮತ್ತು ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೂ (Taj Mahal Palace Hotel) ಭಾನುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದು, ಭಾರಿ ಆತಂಕ ಸೃಷ್ಟಿಸಿತ್ತು. ಆದರೆ, ಪೊಲೀಸರು ನಡೆಸಿದ ತೀವ್ರ ತಪಾಸಣೆಯ ನಂತರ ಇದು ಹುಸಿ (Hoax) ಬೆದರಿಕೆ ಕರೆ ಎಂದು ತಿಳಿದುಬಂದಿದೆ.
ಭಾನುವಾರ ಮಧ್ಯರಾತ್ರಿ ಸುಮಾರು 12:13 ರ ಸುಮಾರಿಗೆ ನವಿ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ (Control Room) ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆತ, “ದಾವೂದ್ ಇಬ್ರಾಹಿಂ ತಾಜ್ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿದ್ದಾನೆ, ಹೋಟೆಲ್ ಅನ್ನು ಸ್ಫೋಟಿಸಲಾಗುವುದು” ಎಂದು ಬೆದರಿಕೆ ಹಾಕಿದ್ದನು. ತಕ್ಷಣವೇ ಎಚ್ಚೆತ್ತ ನವಿ ಮುಂಬೈ ಪೊಲೀಸರು ಈ ಮಾಹಿತಿಯನ್ನು ಮುಂಬೈ ಪ್ರಧಾನ ಪೊಲೀಸ್ ನಿಯಂತ್ರಣ ಕೊಠಡಿಗೆ ರವಾನಿಸಿದರು.
ತಾಜ್ ಹೋಟೆಲ್‌ನಲ್ಲಿ ಹೈ ಅಲರ್ಟ್ – ತೀವ್ರ ಶೋಧ ಕಾರ್ಯ
2008ರ 26/11 ಮುಂಬೈ ಉಗ್ರರ ದಾಳಿಯ ಪ್ರಮುಖ ಗುರಿಗಳಲ್ಲಿ ತಾಜ್ ಹೋಟೆಲ್ ಕೂಡ ಒಂದಾಗಿದ್ದರಿಂದ, ಪೊಲೀಸರು ಈ ಕರೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದರು. ಹೋಟೆಲ್‌ನಲ್ಲಿ ತಕ್ಷಣವೇ ಹೈ ಅಲರ್ಟ್ ಘೋಷಿಸಲಾಯಿತು.
ಇದನ್ನೂ ಓದಿ: ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್ನ ವಾಟ್ಸಾಪ್ ಸ್ಕ್ರೀನ್ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?
ಕೊಲಾಬಾ ಪೊಲೀಸ್ ತಂಡ, ಕ್ರೈಮ್ ಬ್ರಾಂಚ್ ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ತಕ್ಷಣವೇ ಸ್ಥಳಕ್ಕೆ ಧಾವಿಸಿದವು. ಹೋಟೆಲ್‌ನ ಮುಖ್ಯ ಲಾಬಿ, ಈಜುಕೊಳ (Swimming Pool), ಬ್ಯಾಂಕ್ವೆಟ್ ಹಾಲ್‌ಗಳು, ರೆಸ್ಟೋರೆಂಟ್‌ಗಳು, ಪಾರ್ಕಿಂಗ್ ಪ್ರದೇಶ ಹಾಗೂ ಹೋಟೆಲ್‌ನ ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ಶ್ವಾನ ದಳದೊಂದಿಗೆ ತೀವ್ರ ತಪಾಸಣೆ ನಡೆಸಲಾಯಿತು.
ಹುಸಿ ಬೆದರಿಕೆ ಎಂದು ಘೋಷಣೆ
ಹಲವು ಗಂಟೆಗಳ ಕಾಲ ಹೋಟೆಲ್‌ನ ಮೂಲೆ ಮೂಲೆಗಳನ್ನು ಜಾಲಾಡಿದ ಭದ್ರತಾ ಸಿಬ್ಬಂದಿಗೆ ಯಾವುದೇ ಆಕ್ಷೇಪಾರ್ಹ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಹೀಗಾಗಿ, ಸಾರ್ವಜನಿಕರು ಮತ್ತು ಪ್ರವಾಸಿಗರು ನಿಟ್ಟುಸಿರು ಬಿಡುವಂತಾಯಿತು ಮತ್ತು ಪೊಲೀಸರು ಇದೊಂದು ಹುಸಿ ಬೆದರಿಕೆ ಕರೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದರು.
ತನಿಖೆ ಮತ್ತು ಆರೋಪಿಗಾಗಿ ಹುಡುಕಾಟ
ಪೊಲೀಸರ ತಾಂತ್ರಿಕ ತನಿಖೆಯಿಂದ ಈ ಬೆದರಿಕೆ ಕರೆ ನವಿ ಮುಂಬೈನ ‘ತುರ್ಭೆ’ (Turbhe) ಪ್ರದೇಶದಿಂದ ಬಂದಿರುವುದು ಪತ್ತೆಯಾಗಿದೆ. ಕರೆ ಮಾಡಲು ಬಳಕೆಯಾದ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಲು ಮುಂಬೈ ಮತ್ತು ನವಿ ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನೀ ನಾಗರಿಕರು; ಒಬ್ಬ ಮಹಿಳೆ ಸೇರಿ ಇಬ್ಬರ ಬಂಧನ
ದೆಹಲಿಯ ರೆಡ್ ಫೋರ್ಟ್ಗೂ ಬಂದಿತ್ತು ಬಾಂಬ್ ಬೆದರಿಕೆ
ಇದಕ್ಕೂ ಕೇವಲ ಒಂದು ದಿನ ಮುನ್ನ (ಜುಲೈ 11) ದೆಹಲಿಯ ಐತಿಹಾಸಿಕ ಕೆಂಪು ಕೋಟೆಗೂ (Red Fort) ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದ್ದ ಆ ಕರೆಯ ನಂತರ ಕೆಂಪು ಕೋಟೆಯಲ್ಲಿ ತಪಾಸಣೆ ನಡೆಸಿ, ಅದೂ ಕೂಡ ಹುಸಿ ಕರೆ ಎಂದು ಧೃಡಪಡಿಸಲಾಗಿತ್ತು. ಸರಣಿ ಹುಸಿ ಕರೆಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ