ಶಿವಮೊಗ್ಗ, ಜುಲೈ 13: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಸಂಘಗಳಿಗೆ ನಕಲಿ ಚಿನ್ನವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಭಾರಿ ವಂಚನೆ ಜಾಲವನ್ನು ದೊಡ್ಡಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಭಾನುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಲೋಕೇಶ್ ಎಂಬ ಆರೋಪಿಯನ್ನು ಬಂಧಿಸಿದ್ದರು. ಆದರೆ ವಂಚನೆಯ ಕಿಂಗ್ಪಿನ್ ಎನ್ನಲಾದ ರಾಹುಲ್ ಸೇರಿದಂತೆ ಸುಧಾ, ರವಿಶಂಕರ್ ಮತ್ತು ಶರತ್ ನಾಪತ್ತೆಯಾಗಿದ್ದರು. ಇದೀಗ ರಾಹುಲ್ ಸಹ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ನಕಲಿ ಹಾಲ್ ಮಾರ್ಕ್ ಹಾಕಿ ವಂಚನೆ!
ತೀರ್ಥಹಳ್ಳಿಯ ಬಗ್ಗೋಡಿ ಗ್ರಾಮದ ರಾಹುಲ್ ಮತ್ತು ಲೋಕೇಶ್ ಎಂಬ ಸಹೋದರರು ಈ ಇಡೀ ದಂಧೆಯ ಸೂತ್ರಧಾರರು. ಆರೋಪಿಗಳು ರಾಷ್ಟ್ರೀಕೃತ ಬ್ಯಾಂಕ್ಗಳು, ಡಿಸಿಸಿ ಬ್ಯಾಂಕ್ ಹಾಗೂ ಸ್ಥಳೀಯ ಸೌಹಾರ್ದ ಸಹಕಾರಿ ಸಂಘಗಳನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದರು. ಇವರು ಬ್ಯಾಂಕ್ಗಳಿಗೆ ತರುತ್ತಿದ್ದ ಚಿನ್ನಾಭರಣಗಳ ಮೇಲೆ ಕೇವಲ ಶೇಕಡಾ 10 ರಿಂದ 30 ರಷ್ಟು ಮಾತ್ರ ಅಸಲಿ ಚಿನ್ನದ ಲೇಪನ ಇರುತ್ತಿತ್ತು. ಮೇಲ್ನೋಟಕ್ಕೆ ಇದು ಅಸಲಿ ಚಿನ್ನದಂತೆಯೇ ಕಾಣುವಂತೆ ಮಾಡಲು ವಂಚಕರು ಇವುಗಳ ಮೇಲೆ ನಕಲಿ ‘ಹಾಲ್ಮಾರ್ಕ್’ (Hallmark) ಮುದ್ರೆಯನ್ನು ಸಹ ಹಾಕಿಸಿದ್ದರು. ಇದರಿಂದಾಗಿ ಬ್ಯಾಂಕ್ ಸಿಬ್ಬಂದಿ ಹಾಗೂ ಅಪ್ರೈಸರ್ಗಳಿಗೆ ಯಾವುದೇ ಅನುಮಾನ ಬಾರದಂತೆ ಸಲೀಸಾಗಿ ಸಾಲ ಮಂಜೂರಾಗುತ್ತಿತ್ತು.
ವಂಚಕರು ರಾಹುಲ್, ಲೋಕೇಶ್, ಸುಧಾ ಮತ್ತು ರಾಜೇಶ್ ಎಂಬ ಹೆಸರುಗಳಲ್ಲಿಯೇ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆಯುತ್ತಿದ್ದರು. ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಗೋಪಾಳ ಮತ್ತು ವಿದ್ಯಾನಗರದ ಡಿಸಿಸಿ ಬ್ಯಾಂಕ್ ಶಾಖೆಗಳು, ಅಲ್ಕೋದ ಸಿರಿ ಸೌಹಾರ್ದ ಸೊಸೈಟಿ, ಸರಸ್ವತಿ ಸಹಕಾರ ಸಂಘ ಹಾಗೂ ಅನ್ನಪೂರ್ಣೇಶ್ವರಿ ಜ್ಯುವೆಲ್ಲರಿ ಸೇರಿದಂತೆ ಹಲವೆಡೆ ಸುಮಾರು 700 ಗ್ರಾಂ ನಕಲಿ ಚಿನ್ನವಿಟ್ಟು 40 ರಿಂದ 50 ಲಕ್ಷ ರೂಪಾಯಿ ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬ್ಯಾಂಕ್ಗಳಿಂದ ಲೂಟಿ ಮಾಡಿದ ಸಾರ್ವಜನಿಕರ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ನಿಂದ ಫ್ಲೈಟ್ನಲ್ಲಿ ಬರುತ್ತಿತ್ತು ನಕಲಿ ಚಿನ್ನ!
ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಈ ದಂಧೆಯ ಹಿಂದೆ ಅಂತರರಾಜ್ಯ ಜಾಲವಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ತೀರ್ಥಹಳ್ಳಿಯ ಮೃಗವಧೆ ಮೂಲದ ಶರತ್ ಎಂಬಾತನೇ ಈ ಇಡೀ ಸ್ಕ್ಯಾಮ್ನ ಅಸಲಿ ಮಾಸ್ಟರ್ಮೈಂಡ್. ಈತ ಪಂಜಾಬ್ನ ಅಮೃತಸರದಿಂದ ಇಂತಹ ನಕಲಿ ಕೋಟಿಂಗ್ ಚಿನ್ನಾಭರಣಗಳನ್ನು ವಿಮಾನದ ಮೂಲಕ ತರುತ್ತಿದ್ದ. ಶರತ್ ಅತ್ಯಂತ ಚಾಣಾಕ್ಷನಾಗಿದ್ದು, ಬ್ಯಾಂಕ್ಗಳಿಗೆ ನೇರವಾಗಿ ಹೋಗದೆ ಕೇವಲ ತೆರೆಮರೆಯಲ್ಲಿ ನಿಂತು ರಾಹುಲ್ ಹಾಗೂ ಲೋಕೇಶ್ ಸಹೋದರರನ್ನು ದಾಳವಾಗಿ ಬಳಸಿಕೊಂಡಿದ್ದ. ಸದ್ಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಇದನ್ನೂ ಓದಿ ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ಗಳಿಗೇ ಲಕ್ಷಾಂತರ ರೂ. ವಂಚನೆ
ಮಾಸ್ಟರ್ ಮೈಂಡ್ಗಾಗಿ ಹುಡುಕಾಟ
ದೊಡ್ಡಪೇಟೆ ಪೊಲೀಸರು ಈಗಾಗಲೇ ಲೋಕೇಶ್ ಹಾಗೂ ಕಿಂಗ್ಪಿನ್ ರಾಹುಲ್ ಇಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರಾಹುಲ್ ತೀರ್ಥಹಳ್ಳಿಯ ಸರಸ್ವತಿ ಸೌಹಾರ್ದ ಸೊಸೈಟಿಯಲ್ಲಿ 165 ಗ್ರಾಂ ನಕಲಿ ಚಿನ್ನವಿಟ್ಟು 10.68 ಲಕ್ಷ ರೂ. ಹಾಗೂ ಅನ್ನಪೂರ್ಣೇಶ್ವರಿಯಲ್ಲಿ 50 ಸಾವಿರ ರೂ. ಸಾಲ ಪಡೆದಿರುವುದು ಖಚಿತಪಟ್ಟಿದೆ. ಸದ್ಯ ತಲೆಮರೆಸಿಕೊಂಡಿರುವ ಶರತ್ ಪತ್ತೆಯಾದರೆ ಇನ್ನಷ್ಟು ಬ್ಯಾಂಕ್ ವಂಚನೆ ಪ್ರಕರಣಗಳು ಹೊರಬರುವ ಸಾಧ್ಯತೆಯಿದೆ ಎಂದು ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ