Headlines

ವಾಟ್ ಎ ಕ್ಯಾಚ್: ರಾಕೆಟ್ ವೇಗದಲ್ಲಿ ಬಂದ ಚೆಂಡನ್ನು ಹಿಡಿದ ರಿಚಾ ಘೋಷ್ – Kannada News | Richa Ghosh held on to an absolute blinder at silly mid off

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ರೋಚಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದ ಮೂರನೇ ದಿನದಾಟದ ಕೊನೆಯ ಅವಧಿಯಲ್ಲಿ, ಭಾರತದ ಯುವ ಆಟಗಾರ್ತಿ ರಿಚಾ ಘೋಷ್ ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತ ನೀಡಿದ್ದ 457 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಕೇವಲ 59 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ಆಮಿ ಜೋನ್ಸ್ ಮತ್ತು ಮ್ಯಾಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಾ 67 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಈ ಜೋಡಿ, ಪಂದ್ಯವನ್ನು ನಾಲ್ಕನೇ ದಿನಕ್ಕೆ ಕೊಂಡೊಯ್ಯುವ ಎಲ್ಲಾ ಸೂಚನೆ ನೀಡಿದ್ದರು. ಹೀಗಾಗಿಯೇ ಟೀಮ್ ಇಂಡಿಯಾಗೆ ಈ ಜೋಡಿಯನ್ನು ಬೇರ್ಪಡಿಸುವುದು ಅತ್ಯಂತ ಅಗತ್ಯವಾಗಿತ್ತು.

ರಿಚಾ ಘೋಷ್ ಕಮಾಲ್:

ದಿನದಾಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಆಫ್-ಸ್ಪಿನ್ನರ್ ಸ್ನೇಹ್ ರಾಣಾ ಕೈಗೆ ಚೆಂಡನ್ನು ನೀಡಿದರು. ಬ್ಯಾಟರ್ ಮೇಲೆ ಒತ್ತಡ ಹೇರಲು ನಿಯಮಿತ ವಿಕೆಟ್ ಕೀಪರ್ ಆದ ರಿಚಾ ಘೋಷ್ ಅವರನ್ನು ಹೆಲ್ಮೆಟ್ ಧರಿಸಿ ಬ್ಯಾಟರ್‌ನ ತೀರ ಹತ್ತಿರದ ‘ಸಿಲ್ಲಿ ಮಿಡ್-ಆಫ್’  ಸ್ಥಾನದಲ್ಲಿ ನಿಲ್ಲಿಸಲಾಯಿತು. ಅಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಆ ಪವಾಡ ಘಟಿಸಿತು.

ಸ್ನೇಹ್ ರಾಣಾ ಎಸೆದ ಚೆಂಡನ್ನು ಇಂಗ್ಲೆಂಡ್‌ನ ಮ್ಯಾಡಿ ವಿಲಿಯರ್ಸ್ ಅತ್ಯಂತ ಬಲವಾಗಿ ಮತ್ತು ಪೂರ್ಣ ಶಕ್ತಿಯಿಂದ ಮುಂದಕ್ಕೆ ಬಂದು ಡ್ರೈವ್ ಮಾಡಿದರು.

ಬ್ಯಾಟ್‌ಗೆ ತಗುಲಿದ ಚೆಂಡು ರಾಕೆಟ್ ವೇಗದಲ್ಲಿ ನೇರವಾಗಿ ಸಿಲ್ಲಿ ಮಿಡ್-ಆಫ್‌ನಲ್ಲಿದ್ದ ರಿಚಾ ಘೋಷ್ ಕಡೆಗೆ ಚಿಮ್ಮಿತು. ಯಾರಾದರೂ ಸಾಮಾನ್ಯ ಫೀಲ್ಡರ್ ಆಗಿದ್ದರೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು.

ಆದರೆ ರಿಚಾ ಘೋಷ್, ವಿಕೆಟ್ ಕೀಪಿಂಗ್ ಗ್ಲೌಸ್ ಇಲ್ಲದಿದ್ದರೂ, ಮೊಣಕಾಲಿನ ಎತ್ತರಕ್ಕೆ ಬಂದ ಆ ಬುಲೆಟ್ ವೇಗದ ಚೆಂಡನ್ನು ತಮ್ಮ ಬರಿಗೈಗಳಿಂದಲೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡರು.  ಚೆಂಡನ್ನು ಅಷ್ಟು ಬಲವಾಗಿ ಹೊಡೆದರೂ ಅದು ಕ್ಯಾಚ್ ಆಗಿದ್ದನ್ನು ಕಂಡ ಬ್ಯಾಟರ್ ಮ್ಯಾಡಿ ವಿಲಿಯರ್ಸ್ ನಂಬಲಾಗದೆ, ಪಿಚ್ ಮೇಲೆಯೇ ದಿಗ್ಭ್ರಮೆಯಿಂದ ಕೆಲಕಾಲ ನಿಂತುಬಿಟ್ಟರು.

ಚೆಂಡಿನ ತೀವ್ರ ಹೊಡೆತಕ್ಕೆ ರಿಚಾ ಘೋಷ್ ಅವರ ಕೈ ಬೆರಳುಗಳಿಗೆ ತೀವ್ರ ನೋವಾಗಿದ್ದರೂ, ತಂಡಕ್ಕೆ ಸಿಕ್ಕ ಅತಿ ದೊಡ್ಡ ಬ್ರೇಕ್‌ಥ್ರೂ ಸಂಭ್ರಮದಲ್ಲಿ ಅವರು ಆ ನೋವನ್ನು ಮರೆತರು.

ಇದನ್ನೂ ಓದಿ: ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಆರಂಭಿಸಲು ಐಸಿಸಿ ಮಾಸ್ಟರ್ ಪ್ಲ್ಯಾನ್!

ಈ ಅದ್ಭುತ ಕ್ಯಾಚ್‌ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ರಿಚಾ ಅವರ ಧೈರ್ಯಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *