ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!Image Credit source: deccanherald.com
ಬೆಂಗಳೂರು, ಜುಲೈ 15: ತ್ವರಿತ ವಿತರಣಾ (Quick Commerce) ವೇದಿಕೆ ಇನ್‌ಸ್ಟಾಮಾರ್ಟ್ (Instamart) ಮೂಲಕ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಅವಕಾಶವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪರಿಚಯಿಸಿದೆ. ಈ ಸೇವೆ ಆರಂಭವಾಗುತ್ತಿರುವ ದೇಶದ ಮೊದಲ ನಗರವಾಗಿ ಬೆಂಗಳೂರು ಆಯ್ಕೆಯಾಗಿದೆ. ಬುಧವಾರ ಘೋಷಿಸಲಾದ ಈ ಸೇವೆಯಲ್ಲಿ ಆರಂಭಿಕ ಹಂತದಲ್ಲಿ HPCLನ ಹೊಸ 10 ಕೆ.ಜಿ. ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ‘HP Navya’ ಹಾಗೂ 5 ಕೆ.ಜಿ. ಲೋಹದ (Metal) ಎಲ್‌ಪಿಜಿ ಸಿಲಿಂಡರ್ ಲಭ್ಯವಾಗಲಿದೆ.
ಯಾರು ಬೇಕಾದರೂ ಆರ್ಡರ್ ಮಾಡಬಹುದು!
ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ (On-demand) ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ. ಈ ಸೇವೆಯ ವಿಶೇಷತೆ ಎಂದರೆ, ಈ ಸಿಲಿಂಡರ್ ಖರೀದಿಸಲು ಈಗಾಗಲೇ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ (Domestic LPG Connection) ಹೊಂದಿರಬೇಕೆಂಬ ಅವಶ್ಯಕತೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಣ್ಣ ಕುಟುಂಬಗಳಿಗೆ ಈ ಸೇವೆ ಹೆಚ್ಚು ಅನುಕೂಲಕರವಾಗಲಿದೆ. ಸಿಲಿಂಡರ್ ರಿಫಿಲ್ ಬೇಕಾದರೆ, ಹೊಸ ಸಿಲಿಂಡರ್ ವಿತರಿಸುವ ವೇಳೆ ಖಾಲಿ HPCL ಸಿಲಿಂಡರ್ ಅನ್ನು ಹಿಂತಿರುಗಿಸಿದರೆ ಸಾಕು.
ಇದನ್ನೂ ಓದಿ: ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್ ಪಾಲಿಸಿ
ಈ ಬಗ್ಗೆ ಮಾಹಿತಿ ನೀಡಿರುವ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, ಇನ್‌ಸ್ಟಾಮಾರ್ಟ್ ಕೇವಲ ದಿನಸಿ ವಸ್ತುಗಳ ವಿತರಣೆಗೆ ಸೀಮಿತವಾಗಿಲ್ಲ. HPCL ಜೊತೆಗಿನ ಈ ಸಹಭಾಗಿತ್ವದ ಮೂಲಕ ಅತ್ಯಗತ್ಯ ಗೃಹಬಳಕೆಯ ಸೇವೆಯಾದ LPG ವಿತರಣೆಯನ್ನೂ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ. ಗ್ರಾಹಕರು ನಿರೀಕ್ಷಿಸುವ ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡೇ ಈ ಸೇವೆ ಒದಗಿಸಲಾಗುತ್ತಿದೆ ಎಂದಿದ್ದಾರೆ.
HPCLನ ಅಧಿಕೃತ ವಿತರಕರ ಜಾಲದ ಮೂಲಕವೇ ಪೂರೈಕೆ
ಈ ಸೇವೆಯಡಿ ಬರುವ ಎಲ್ಲಾ ಆರ್ಡರ್‌ಗಳನ್ನು HPCLನ ಅಧಿಕೃತ ವಿತರಕರ ಜಾಲ (Authorised Distributor Network) ಮೂಲಕ ಪೂರೈಸಲಾಗುತ್ತದೆ. ಮೊದಲ ಬಾರಿಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ವಿತರಣೆಗೂ ಮುನ್ನ ಕಡ್ಡಾಯವಾಗಿ ಗುರುತಿನ ಪರಿಶೀಲನೆ (Identity Verification) ಪೂರ್ಣಗೊಳಿಸಬೇಕಾಗುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.