Headlines

ನಿರುದ್ಯೋಗಿಗಳೇ ಇವರ ಟಾರ್ಗೆಟ್: MNC ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ – Kannada News | Job Scam in Whitefield: MNC Recruitment Fraud Targets Unemployed Youth

ಬೆಂಗಳೂರು, ಜುಲೈ 15: “ಎಂಎನ್‌ಸಿ ಕಂಪನಿಗಳಲ್ಲಿ ಕೈತುಂಬಾ ಸಂಬಳ, ವರ್ಷ ವರ್ಷವೂ ಭರ್ಜರಿ ಹೈಕ್ ನೀಡಲಾಗುವುದು. ನಮ್ಮ ಸಂಸ್ಥೆಗೆ ಬಂದರೆ ನಿಮ್ಮ ಭವಿಷ್ಯವೇ ಬದಲಾಗುತ್ತದೆ” ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿ ಇಂಟರ್ವಿವ್ಯೂಗೆ ಹೋಗುವ ಮುನ್ನ ನಿರುದ್ಯೋಗಿಗಳು ಎಚ್ಚರ ವಹಿಸಬೇಕಾಗಿದೆ. ಏಕೆಂದರೆ, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ (job scam) ಕೊಡಿಸುವುದಾಗಿ ನಂಬಿಸಿ ಯುವಕ-ಯುವತಿಯರಿಗೆ ಲಕ್ಷಾಂತರ ರೂ ವಂಚಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಭೇದಿಸಿದ್ದಾರೆ. ಉದ್ಯೋಗದ ಆಸೆಗೆ ಬಿದ್ದ ನೂರಾರು ವಿದ್ಯಾವಂತರು ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ 

ವಂಚಕರು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಕಲಿ ಕಂಪನಿಯ ಕಚೇರಿಯನ್ನು ತೆರೆದು, ದೇಶದ ವಿವಿಧ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದರು. ಉದ್ಯೋಗ ಆಕಾಂಕ್ಷಿಗಳನ್ನು ಆಕರ್ಷಿಸಿ, ಅವರಿಗೆ ಪರೀಕ್ಷೆಯ ನೆಪ ಒಡ್ಡಿ ತಲಾ 2,000 ದಿಂದ 3,000 ರೂ. ಗಳವರೆಗೆ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿದ್ದರು. ನಿಗದಿತ ದಿನದಂದು ಒಂದೇ ಹಾಲ್‌ನಲ್ಲಿ 30 ರಿಂದ 40 ಜನರಿಗೆ ಪರೀಕ್ಷೆ ಬರೆಸಿ, ಫಲಿತಾಂಶ ಬಂದ ನಂತರ ಕರೆ ಮಾಡುವುದಾಗಿ ಹೇಳಿ ಕಳುಹಿಸುತ್ತಿದ್ದರು.

ಹಲವು ವರ್ಷಗಳಿಂದ ಲಕ್ಷಾಂತರ ರೂ ಲೂಟಿ 

ಪರೀಕ್ಷೆ ಮುಗಿದು ವಾರ ಕಳೆದರೂ ಕಂಪನಿಯಿಂದ ಯಾವುದೇ ಕರೆ ಬಾರದಿದ್ದಾಗ ಅಭ್ಯರ್ಥಿಗಳೇ ಸ್ವತಃ ಕರೆ ಮಾಡಿದ್ದಾರೆ. ಈ ವೇಳೆ ವಂಚಕರು, “ನೀವು ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಹೀಗಾಗಿ ಆಯ್ಕೆಯಾಗಿಲ್ಲ. ಆ ಹುದ್ದೆಗೆ ಮತ್ತೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬೇಕಿದ್ದರೆ ಮುಂದಿನ ಬಾರಿ ಮತ್ತೊಮ್ಮೆ ಪ್ರಯತ್ನಿಸಿ” ಎಂದು ಹಾರಿಕೆ ಉತ್ತರ ನೀಡುತ್ತಿದ್ದರು. ಹಣ ಕಳೆದುಕೊಂಡವರು ಕೇವಲ ಎರಡು-ಮೂರು ಸಾವಿರ ರೂ ತಾನೇ ಎಂದು ಭಾವಿಸಿ, ಕಂಪನಿಯನ್ನು ಪ್ರಶ್ನಿಸದೆ ಸುಮ್ಮನೆ ವಾಪಸ್ ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ರೂ ಲೂಟಿ ಮಾಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರೇ ಎಚ್ಚರ: ಪ್ರಯಾಣಿಕರ ಸೋಗಿನಲ್ಲಿ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್

ಇನ್ನು ಇತ್ತೀಚೆಗೆ ಮೋಸಹೋದ ಕೆಲವು ಅಭ್ಯರ್ಥಿಗಳು ತಾವು ಬರೆದಿರುವ ಪರೀಕ್ಷಾ ಪತ್ರಿಕೆಗಳನ್ನು  ತೋರಿಸುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕಚೇರಿಯ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದಾಗ ಅನುಮಾನಗೊಂಡು ಸಂತ್ರಸ್ತರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಮುಖ ಆರೋಪಿಯ ಬಂಧನ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಸಂಪೂರ್ಣ ನಕಲಿ ಕಂಪನಿ ಎಂಬುದು ಬಯಲಾಗಿದೆ. ಸದ್ಯ ಈ ವಂಚನೆ ಜಾಲದ ಪ್ರಮುಖ ಆರೋಪಿ ಪವನ್ ಗೋಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಧೆಯ ಹಿಂದೆ ಇಡೀ ಗ್ಯಾಂಗ್ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *