Headlines

‘ರಾಮಾಯಣ ಸಿನಿಮಾ ನೋಡಬೇಡಿ’; ಆಸ್ಟ್ರೇಲಿಯಾದಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಲಹೆ; ಕಾರಣ ಏನು? – Kannada News | Ranbir Kapoor Ramayana Movie M Rating Australian Classification Board Reasons details

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಲಿದ್ದು, ಇದಕ್ಕೂ ಮುನ್ನ ಚಿತ್ರದ ಬಗ್ಗೆ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯು (Australian Classification Board) ಈ ಚಿತ್ರದ ಸ್ಪೆಷಲ್ ವಿಡಿಯೋ ಪ್ಯಾಕೇಜ್‌ಗೆ ‘M’ (Mature) ರೇಟಿಂಗ್ ನೀಡಿದೆ. ಇದರಿಂದ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

‘M’ ರೇಟಿಂಗ್ ನೀಡಲು ಕಾರಣವೇನು?

ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರದಲ್ಲಿ ಮಧ್ಯಮ ಪ್ರಮಾಣದ ಹಿಂಸಾಚಾರ ಇರುವುದರಿಂದ ಇದಕ್ಕೆ ‘M’ ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾದ ನಿಯಮಗಳ ಪ್ರಕಾರ, ‘M’ ರೇಟಿಂಗ್ ಹೊಂದಿರುವ ಸಿನಿಮಾಗಳನ್ನು 15 ವರ್ಷದೊಳಗಿನ ಮಕ್ಕಳು ವೀಕ್ಷಿಸುವುದನ್ನು ಶಿಫಾರಸು ಮಾಡುವುದಿಲ್ಲ. ಆದರೆ, ಇದು ಕೇವಲ ಒಂದು ಸಲಹೆಯಾಗಿದ್ದು, ಕಾನೂನುಬದ್ಧವಾಗಿ ಮಕ್ಕಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಕ್ಕೆ ಯಾವುದೇ ನಿಷೇಧ ಇರುವುದಿಲ್ಲ. ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ಇದನ್ನು ವೀಕ್ಷಿಸಬಹುದಾಗಿದೆ.

ಸಿನಿಮಾದ ಕಥಾಹಂದರ ಹೀಗಿದೆ:

ಸೆನ್ಸಾರ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಚಿತ್ರದ ಸಂಕ್ಷಿಪ್ತ ಕಥೆಯನ್ನು ಬರೆಯಲಾಗಿದೆ. ‘ಇದು ಯುವ ರಾಜಕುಮಾರ ಮತ್ತು ರಾಜಕುಮಾರಿಯ ಪುರಾತನ ಮಹಾಕಾವ್ಯವಾಗಿದೆ. ಇವರ ವಿವಾಹ ಮತ್ತು ತದನಂತರದ ವನವಾಸವು ಒಂದು ಐತಿಹಾಸಿಕ ಪ್ರಯಾಣಕ್ಕೆ ನಾಂದಿ ಹಾಡುತ್ತದೆ. ಕರ್ತವ್ಯ, ಪ್ರೀತಿ ಮತ್ತು ವಿಧಿಯ ಈ ಕಥೆಯು ಮುಂದೆ ಎದುರಾಗಲಿರುವ ದೊಡ್ಡ ಸವಾಲುಗಳಿಗೆ ಸಾಕ್ಷಿಯಾಗಲಿದೆ’ ಎಂದು ವಿವರ ನೀಡಲಾಗಿದೆ.

ಚೀನಾ ಮಾರುಕಟ್ಟೆ ಮೇಲೆ ಕಣ್ಣಿಟ್ಟ ಚಿತ್ರತಂಡ:

ಮತ್ತೊಂದೆಡೆ, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ: ಪಾರ್ಟ್ 1’ ಚಿತ್ರವನ್ನು ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ. 2020ರ ನಂತರ ಚೀನಾದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಸೂಕ್ತ ಮಾರುಕಟ್ಟೆ ಸಿಕ್ಕಿರಲಿಲ್ಲ. ಆದರೆ, ರಾಮಾಯಣ ಚಿತ್ರದ ಮೂಲಕ ಚೀನಾ ಮಾರುಕಟ್ಟೆಯನ್ನು ಮತ್ತೊಮ್ಮೆ ವಶಪಡಿಸಿಕೊಳ್ಳಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: ದೆಹಲಿಯ ಭಾರತ್ ಮಂಟಪದಲ್ಲಿ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಟ್ರೇಲರ್ ಲಾಂಚ್?

ಜುಲೈ 11ರಂದು ಘೋಷಣೆ ಮಾಡಿರುವಂತೆ, ‘ರಾಮಾಯಣ’ ಚಿತ್ರತಂಡವು ಜುಲೈ 24ರಂದು ಜಾಗತಿಕವಾಗಿ ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ದೆಹಲಿಯಲ್ಲಿ ದೊಡ್ಡ ಇವೆಂಟ್ ನಡೆಸುವ ಪ್ಲ್ಯಾನ್ ಕೂಡ ಇದೆ ಎನ್ನಲಾಗಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *