ಉತ್ತರ ಕನ್ನಡ, ಜು.17: ವಿಶ್ವಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರ ದೇವಸ್ಥಾನದ (Murdeshwar Temple) ಹೆಸರನ್ನು ದುರುಪಯೋಗಪಡಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅದೃಷ್ಟ ಡ್ರಾ (Lucky Draw) ನಡೆಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಮುರುಡೇಶ್ವರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಪ್ರಮುಖ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂದು ಗುರುತಿಸಲಾಗಿದೆ. ಈತ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ. ಆರೋಪಿ ನರಸಿಂಗ್ ಅತ್ಯಂತ ವ್ಯವಸ್ಥಿತವಾಗಿ ನಕಲಿ ಜಾಲವನ್ನು ರೂಪಿಸಿಕೊಂಡು ಜನರನ್ನು ವಂಚಿಸುತ್ತಿದ್ದ.
ಆರೋಪಿಯು “ಶ್ರೀ ಮುರ್ಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ನಕಲಿ ಭಿತ್ತಿಪತ್ರಗಳನ್ನು ಸೃಷ್ಟಿಸಿದ್ದ. ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಆ ಮೂಲಕ ಲಾಟರಿ ಟಿಕೆಟ್ ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ: ನನ್ನ ಮಗಳು ನನಗೆ ಬೇಕು, ಕೊಲೆಗಡುಕನನ್ನು ನನ್ನ ಮುಂದೇ ನಿಲ್ಲಿಸಿ
ಮುರುಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಸಾರ್ವಜನಿಕರನ್ನು ದೋಚುತ್ತಿರುವ ಈ ಗಂಭೀರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ದೇವಸ್ಥಾನದ ವ್ಯವಸ್ಥಾಪಕರಾದ ಮಂಜುನಾಥ ಶೆಟ್ಟಿ ಅವರು ಈ ವಂಚನೆಯ ಜಾಲದ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿಗಳನ್ನು ಕಲೆಹಾಕಿ, ಕೊನೆಗೆ ಬೀದರ್ ಮೂಲದ ಆರೋಪಿ ನರಸಿಂಗ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವಸ್ಥಾನಕ್ಕೂ ಮತ್ತು ಇಂತಹ ಯಾವುದೇ ಲಕ್ಕಿ ಡ್ರಾಗೂ ಯಾವುದೇ ಸಂಬಂಧ ಇರುವುದಿಲ್ಲ. ಭಕ್ತರು ಇಂತಹ ನಕಲಿ ಲಾಟರಿ ಆಮಿಷಗಳಿಗೆ ಬಲಿಯಾಗಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ