ಬೆಂಗಳೂರು, ಜುಲೈ 17: ದೂರದ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ತೀವ್ರ ಪ್ರಭಾವ ಭಾರತದ ಮೇಲೂ ಬೀರಿದೆ. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ತೈಲ ಬಿಕ್ಕಟ್ಟು ಹಾಗೂ ಆರ್ಥಿಕ ಹಿನ್ನಡೆ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಕಾಪಾಡುವ ಮತ್ತು ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸಾರ್ವಜನಿಕರು ಮುಂದಿನ ಒಂದು ವರ್ಷಗಳ ಕಾಲ ಹೊಸ ಚಿನ್ನವನ್ನು ಖರೀದಿ (Gold) ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕರೆ ನೀಡಿದ್ದರು. ಈ ಕರೆಗೆ ಬೆಂಗಳೂರಿನ ಜನತೆ ದೊಡ್ಡ ಮಟ್ಟದಲ್ಲಿ ಸ್ಪಂದಿಸಿದ್ದು, ನಗರದಲ್ಲಿ ಬಂಗಾರದ ವ್ಯಾಪಾರವು ಅರ್ಧದಷ್ಟು ಕುಸಿದಿದೆ ಎಂದು ಜ್ಯುವೆಲರ್ಸ್ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ.
ಬೆಲೆ ಇಳಿಕೆಯಾದರೂ ಖರೀದಿಗೆ ಹಿಂದೇಟು: ಎಕ್ಸ್ಚೇಂಜ್ಗೆ ಒಲವು
ಯುದ್ಧದ ಮಾರುಕಟ್ಟೆ ಏರುಪೇರುಗಳಿಂದಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದ್ದರೂ ಸಹ, ಸಿಟಿ ಜನತೆ ಮಾತ್ರ ಹೊಸ ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ಬಂಗಾರದ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಶೇಕಡಾ 40 ರಿಂದ 50 ರಷ್ಟು ಕಮ್ಮಿಯಾಗಿದ್ದು, ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು? ಬಂಗಾರ ಖರೀದಿ ನಿಲ್ಲಿಸಿದ್ರೆ ದೇಶಕ್ಕಾಗುವ ಲಾಭವೇನು?
ಪ್ರಸ್ತುತ ಸಾರ್ವಜನಿಕರು ಹೊಸ ಚಿನ್ನವನ್ನು ಕೊಳ್ಳುವ ಬದಲು, ತಮ್ಮ ಬಳಿ ಇರುವ ಹಳೆಯ ಆಭರಣಗಳನ್ನು ನೀಡಿ ಹೊಸ ಗೋಲ್ಡ್ ಎಕ್ಸ್ಚೇಂಜ್ ಮಾಡಿಕೊಳ್ಳುವತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದು ರಾಜ್ಯ ಜ್ಯುವೆಲರ್ಸ್ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಬಂಗಾರದ ಮೇಲೆ ಹೂಡಿಕೆಯೂ ಕುಸಿತ
ಸಾಮಾನ್ಯವಾಗಿ ಚಿನ್ನದ ಬೆಲೆ ಇಳಿಕೆಯಾದಾಗ ಜನಸಾಮಾನ್ಯರು ಆಭರಣಗಳನ್ನು ಹಾಗೂ ಹೂಡಿಕೆದಾರರು ಇನ್ವೆಸ್ಟ್ಮೆಂಟ್ ಹೆಸರಿನಲ್ಲಿ ಚಿನ್ನದ ನಾಣ್ಯ ಹಾಗೂ ಬಿಸ್ಕೆಟ್ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದರು. ಆದರೆ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವವರ ಪ್ರಮಾಣದಲ್ಲಿ ಶೇಕಡಾ 80 ರಷ್ಟು ಕುಸಿತ ಕಂಡುಬಂದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ
ಆರ್ಥಿಕತೆಯನ್ನು ರಕ್ಷಿಸುವ ಕರೆಗೆ ಸಾರ್ವಜನಿಕರು ಕಿವಿಕೊಟ್ಟಿರುವುದು ದೇಶದ ದೃಷ್ಟಿಯಿಂದ ಧನಾತ್ಮಕವಾಗಿದ್ದರೂ, ಇತ್ತ ಚಿನ್ನದ ಆಭರಣ ವ್ಯಾಪಾರಿಗಳಿಗೆ ಮಾತ್ರ ಇದು ದೊಡ್ಡ ಮಟ್ಟದ ಆರ್ಥಿಕ ಹೊಡೆತ ನೀಡುತ್ತಿರುವುದಂತೂ ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.