Headlines

ದೇವೇಗೌಡರ ಬೆನ್ನಿಗೆ ನಿಂತಿದ್ದ ಧೀಶಕ್ತಿ: ಅತಿಥಿಗಳ ಪಾಲಿನ ಅನ್ನಪೂರ್ಣೆ; ಕುಟುಂಬ ಮುನ್ನಡೆಸಿದ ಮಹಾತಾಯಿ ‘ಚೆನ್ನಮ್ಮ’ – Kannada News | Chennamma Passes Away: The Woman Who Stood by Former PM H.D. Deve Gowda

ಹಾಸನ, ಜುಲೈ 18: ದಕ್ಷಿಣ ಭಾರತದ ಏಕೈಕ ಪ್ರಧಾನಿ ಎಂಬ ಇತಿಹಾಸ ಬರೆದವರು ಹೆಚ್​​ಡಿ ದೇವೇಗೌಡರು (HD Deve Gowda). ಈ ಮಣ್ಣಿನ ಮಗನ ಯಶಸ್ಸಿನ ಹಿಂದೆ ಒಬ್ಬ ಅಪ್ರತಿಮ ಮಹಿಳೆಯ ಶ್ರಮವಿದೆ. ಅವರೇ ಪತ್ನಿ ಚೆನ್ನಮ್ಮ. “ಚೆನ್ನಮ್ಮ (Chennamma) ಕೇವಲ ಪತ್ನಿಯಷ್ಟೇ ಅಲ್ಲ, ನನ್ನ ಪಾಲಿನ ತಾಯಿಯೂ ಹೌದು” ಎಂದು ಸ್ವತಃ ದೇವೇಗೌಡರೇ ಹಲವು ಬಾರಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆರು ಮಕ್ಕಳೊಂದಿಗೆ ಇಡೀ ಕುಟುಂಬ ಮುನ್ನಡೆಸಿದ ಮಹಾತಾಯಿ, ಅತಿಥಿಗಳ ಪಾಲಿನ ಅನ್ನಪೂರ್ಣೆ ಇದೀಗ ವಿಧಿವಶರಾಗಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಸುಶಿಕ್ಷಿತೆ: ಪಟೇಲರ ಮುದ್ದಿನ ಮಗಳು

1937ರಲ್ಲಿ ಜನಿಸಿದ ಚೆನ್ನಮ್ಮ ಅವರು ಮುತ್ತಿಗೆಹಿರೆಹಳ್ಳಿಯ ಸಿರಿವಂತ ಪಟೇಲ್ ದೇವೇಗೌಡ ಮತ್ತು ಕಾಳಮ್ಮ ದಂಪತಿಯ ನಾಲ್ಕು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳಲ್ಲಿ ಹಿರಿಯವರು. ಅಂದಿನ ಸ್ವಾತಂತ್ರ್ಯ ಪೂರ್ವದ ಕಾಲದಲ್ಲೇ ತಮ್ಮೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಪಕ್ಕದ ಹೊಳೆನರಸೀಪುರ ತಾಲೂಕಿನ ಹಳೆಕೋಟೆಯ ಶಾಲೆಗೆ ನಿತ್ಯ 5 ಕಿ.ಮೀ ನಡೆದುಕೊಂಡೇ ಹೋಗಿ ಲೋಯರ್ ಸೆಕೆಂಡರಿ ಶಿಕ್ಷಣ ಪೂರೈಸಿದ ಸುಶಿಕ್ಷಿತ ಹೆಣ್ಣುಮಗಳು. ಪ್ರೌಢಶಾಲೆ ಹತ್ತಿರದಲ್ಲಿ ಇಲ್ಲದ ಕಾರಣ ಅವರ ಓದು ಅಲ್ಲಿಗೆ ನಿಂತಿತ್ತಾದರೂ, ತುಂಬಿದ ಕೊಡದಂತಹ ಜ್ಞಾನ ಅವರದಾಗಿತ್ತು. ತಮ್ಮ 17ನೇ ವಯಸ್ಸಿನಲ್ಲಿ, ಅಂದರೆ 1954ರ ಮೇ 25ರಂದು 21 ವರ್ಷದ ಯುವಕ ಹೆಚ್.ಡಿ. ದೇವೇಗೌಡರನ್ನು ಚೆನ್ನಮ್ಮ ವರಿಸಿದರು.

ದಾಂಪತ್ಯದ ಅಪರೂಪದ ಕಾಕತಾಳೀಯಗಳು

72 ವರ್ಷಗಳ ಸುದೀರ್ಘ ಹಾಗೂ ಮಾದರಿ ದಾಂಪತ್ಯ ಜೀವನ ನಡೆಸಿದ ಈ ಜೋಡಿಯ ನಡುವೆ ಹಲವು ಸಾಮ್ಯತೆಗಳಿವೆ. ಚೆನ್ನಮ್ಮ ಅವರ ತವರು ಮನೆ ಹಾಸನ ತಾಲೂಕಿನ ಮುತ್ತಿಗೆಹಿರೆಹಳ್ಳಿಯಾದರೂ, ಅವರು ಜನಿಸಿದ್ದು ತಮ್ಮ ಅಜ್ಜಿ ಮನೆಯಾದ ಹರದನಹಳ್ಳಿಯಲ್ಲಿಯೇ! ಅಂದರೆ ದೇವೇಗೌಡರ ಹುಟ್ಟೂರಿನಲ್ಲೇ ಚೆನ್ನಮ್ಮ ಕೂಡ ಜನಿಸಿದ್ದರು. ಅಷ್ಟೇ ಅಲ್ಲದೆ, ಇಬ್ಬರೂ ಸಹ ತಮ್ಮ ತಂದೆಯಂದಿರ ಎರಡನೇ ಪತ್ನಿಯ ಮಕ್ಕಳು ಎಂಬುದು ವಿಶೇಷ. ದೊಡ್ಡೇಗೌಡರ ಎರಡನೇ ಪತ್ನಿ ದೇವಮ್ಮ ಅವರ ಪುತ್ರ ದೇವೇಗೌಡರಾದರೆ, ಪಟೇಲ್ ದೇವೇಗೌಡರ ಎರಡನೇ ಪತ್ನಿ ಕಾಳಮ್ಮ ಅವರ ಪುತ್ರಿ ಚೆನ್ನಮ್ಮ. ಹರದನಹಳ್ಳಿ ಹಾಗೂ ಮುತ್ತಿಗೆಹಿರೆಹಳ್ಳಿ ನಡುವೆ ಕೇವಲ 4 ಕಿ.ಮೀ ಅಂತರವಿದ್ದಿದ್ದರಿಂದ ಬಾಲ್ಯದಿಂದಲೇ ಇವರಿಬ್ಬರಿಗೂ ಪರಿಚಯವಿತ್ತು.

ಆರು ಮಕ್ಕಳ ತಾಯಿ; ಕುಟುಂಬ ಮುನ್ನಡೆಸಿದ ಮಹಾತಾಯಿ

ಶ್ರೀಮಂತ ಮನೆತನದಿಂದ ಬಂದರೂ ಅಹಂಕಾರವಿಲ್ಲದೆ ಅಪ್ಪಟ ಸಂಪ್ರದಾಯಸ್ಥ ಮಹಿಳೆಯಾಗಿ ಬದುಕಿದ ಚೆನ್ನಮ್ಮ, ದೇವೇಗೌಡರ ರಾಜಕೀಯ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದರು. ಹೆಚ್.ಡಿ. ಬಾಲಕೃಷ್ಣೇಗೌಡ, ಹೆಚ್.ಡಿ. ರೇವಣ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ ನಾಲ್ಕು ಪುತ್ರರು ಹಾಗೂ ಶೈಲಜಾ ಮತ್ತು ಅನಸೂಯ ಎಂಬ ಇಬ್ಬರು ಪುತ್ರಿಯರು ಸೇರಿದಂತೆ ಒಟ್ಟು ಆರು ಜನ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಿದರು. ಪತಿಗೆ ಎಂದಿಗೂ ಸಂಸಾರದ ಹೊರೆ ತಟ್ಟದಂತೆ ಜವಾಬ್ದಾರಿ ನಿಭಾಯಿಸಿ, ಅವರ ರಾಜಕೀಯ ಯಶಸ್ಸಿಗೆ ನೆರಳಾಗಿ ನಿಂತರು. ಪತಿ ಪ್ರಧಾನಿಯಾದರೂ ಎಂದಿಗೂ ರಾಜಕೀಯದಲ್ಲಿ ಮೂಗು ತೂರಿಸದ ಚೆನ್ನಮ್ಮ, ಸದಾ ತೆರೆಯ ಮರೆಯಲ್ಲೇ ಉಳಿದು ಇಡೀ ಕುಟುಂಬವನ್ನು ಅಮ್ಮನಾಗಿ, ಅಜ್ಜಿಯಾಗಿ ಸಲಹಿದರು.

ಚೆನ್ನಮ್ಮ ಮೇಲೆ ಆಸಿಡ್ ದಾಳಿ

ಪರಮ ದೈವಭಕ್ತರಾದ ಈ ಕುಟುಂಬಕ್ಕೆ ಹರದನಹಳ್ಳಿಯ ದೇವೇಶ್ವರ ಸ್ವಾಮಿ ಮನೆದೇರು. ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಪೂಜೆ ಸಲ್ಲಿಸುವುದು ಈ ಕುಟುಂಬದ ವಾಡಿಕೆ. ಆದರೆ 2001ರ ಫೆಬ್ರವರಿ 21ರಂದು ನಡೆದ ಘಟನೆ ಇಡೀ ಕುಟುಂಬವನ್ನು ನಡುಗಿಸಿತ್ತು. ದೇವೇಗೌಡರು ಕಾರ್ಯನಿರತರಾಗಿದ್ದರಿಂದ ಚೆನ್ನಮ್ಮ ಅವರು ಪುತ್ರ ರೇವಣ್ಣ ಹಾಗೂ ಸೊಸೆ ಭವಾನಿ ರೇವಣ್ಣ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಪೂಜೆಯಲ್ಲಿದ್ದಾಗ ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್ ಎಂಬಾತ ಪೂಜೆಯ ನೆಪದಲ್ಲಿ ಬಂದು ಚೆನ್ನಮ್ಮ ಅವರ ಮೇಲೆ ಆಸಿಡ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಚೆನ್ನಮ್ಮ ಅವರ ಮುಖ, ತಲೆಗೆ ಗಂಭೀರ ಗಾಯಗಳಾಗಿದ್ದರೆ, ಭವಾನಿ ರೇವಣ್ಣ ಅವರ ಕೈಗೂ ಗಾಯವಾಗಿತ್ತು. ಪ್ರಾಣಾಪಾಯದಿಂದ ಪಾರಾದ ಈ ಘಟನೆ ರಾಜಕೀಯ ಪಿತೂರಿ ಹಾಗೂ ಕೌಟುಂಬಿಕ ಕಲಹದ ಚರ್ಚೆಗೆ ಗ್ರಾಸವಾಗಿತ್ತು.

ಅತಿಥಿಗಳ ಪಾಲಿನ ಅನ್ನಪೂರ್ಣೆ

ತಮ್ಮ ಇಡೀ ಜೀವನವನ್ನು ಪತಿಯ ಏಳಿಗೆಗಾಗಿ ಪೂಜೆ, ವ್ರತ, ಜಪ-ತಪಗಳಲ್ಲೇ ಕಳೆದ ಚೆನ್ನಮ್ಮ, ಪತಿಯ ಆರೋಗ್ಯದ ವಿಚಾರದಲ್ಲಿ ತಾಯಿಯಂತೆ ಆರೈಕೆ ಮಾಡಿದ ಕರುಣಾಮಯಿ. ದೇವೇಗೌಡರ ಮನೆಗೆ ಬರುವ ಪ್ರತಿಯೊಬ್ಬ ರಾಜಕೀಯ ಮುತ್ಸದ್ದಿ ಹಾಗೂ ಅತಿಥಿಗಳಿಗೆ ತಾವೇ ಸ್ವತಃ ಕೈಯಾರೆ ಅಡುಗೆ ಮಾಡಿ ಪ್ರೀತಿಯಿಂದ ಉಣಿಸುತ್ತಿದ್ದ ಗುಣ ಅವರದಾಗಿತ್ತು. ಅವರ ಕೈರುಚಿ ಸವಿದವರೆಲ್ಲರೂ ಅವರನ್ನು ಅನ್ನಪೂರ್ಣೆ ಎಂದೇ ಕರೆಯುತ್ತಿದ್ದರು. ಹೊಳೆನರಸೀಪುರದ ಪುರಸಭೆಯಿಂದ ಆರಂಭವಾಗಿ ದೆಹಲಿಯ ಕೆಂಪುಕೋಟೆಯವರೆಗಿನ ದೇವೇಗೌಡರ ಐತಿಹಾಸಿಕ ಪಯಣದಲ್ಲಿ ಸದಾ ಧೀಶಕ್ತಿಯಾಗಿ, ಭಾರತೀಯ ನಾರಿಯ ಸಭ್ಯತೆಯ ಗೆರೆ ದಾಟದೆ ಬದುಕಿದ ಚೆನ್ನಮ್ಮ ಅವರ ಜೀವನ ನಿಜಕ್ಕೂ ಇಂದಿನ ತಲೆಮಾರಿಗೆ ಒಂದು ಆದರ್ಶಪ್ರಾಯ ಸಂದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *