ನವದೆಹಲಿ, ಜುಲೈ 20: ನೀಟ್ (NEET UG 2026) ಪರೀಕ್ಷೆಯ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿರುವ ಬೃಹತ್ ‘ಚಲೋ ಸಂಸದ್’ ಪ್ರತಿಭಟನಾ ಮೆರವಣಿಗೆಯಿಂದಾಗಿ ದೆಹಲಿಯಲ್ಲಿ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಪ್ರತಿಭಟನಾಕಾರರು ಸಂಸತ್ ಭವನದ ಬಳಿ ತಲುಪಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದೇ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿರುವ ಕೇಂದ್ರ ಗೃಹ ಸಚಿವರ ಕಚೇರಿಯಲ್ಲಿ ಈ ತುರ್ತು ಸಭೆ ನಡೆದಿದ್ದು, ಇದರಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳ ವಿವರಗಳು ಇನ್ನು ಅಧಿಕೃತವಾಗಿ ಹೊರಬಂದಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಸಂಸತ್ ಭವನದ ಸಮೀಪವಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಟ್ಟಡದ ಬಳಿ ‘ಸಂಸದ್ ಚಲೋ’ ಮೆರವಣಿಗೆಯಲ್ಲಿದ್ದ ಕನಿಷ್ಠ 7 ಸಿಜೆಪಿ (CJP) ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Delhi: Delhi Police personnel were injured during a clash with protesters near Parliament Street earlier today.#CJPProtest pic.twitter.com/bX7COXwTsY
— ANI (@ANI) July 20, 2026
ಅಭಿಜೀತ್ ದಿಪ್ಕೆ ನೇತೃತ್ವದ ಸಿಜೆಪಿ (CJP) ಸಂಘಟನೆಯು ನೀಟ್ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಮತ್ತು ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜೂನ್ 20ರಿಂದಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 20ರಂದು ‘ಚಲೋ ಸಂಸದ್’ ನಡೆಸುವುದಾಗಿ ಸಂಘಟನೆ ಕರೆ ನೀಡಿತ್ತು. ಅದರಂತೆ ಇಂದು ಬೆಳಿಗ್ಗೆ ಜಂತರ್ ಮಂತರ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಸತ್ ಭವನದತ್ತ ನುಗ್ಗಲು ಯತ್ನಿಸಿದರು.
ಇದನ್ನೂ ಓದಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಸೂದೆಗಳ ಮಂಡನೆ,ನೀಟ್ ಪೇಪರ್ ಸೋರಿಕೆ ಕುರಿತು ಗದ್ದಲ ಸಾಧ್ಯತೆ
ನೀಟ್-ಯುಜಿ (NEET-UG) ಸೇರಿದಂತೆ ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿನತ್ತ ನುಗ್ಗಿದ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಸಂಸತ್ತಿನ ಮುಖ್ಯ ಗೇಟ್‌ಗಳನ್ನು ಮುಚ್ಚಿದ್ದಾರೆ. ಈ ಪ್ರತಿಭಟನೆಗೆ ಸುಮಾರು 5,000 ಜನರು ಬರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಆದರೆ, ಜಂತರ್ ಮಂತರ್‌ನಲ್ಲಿ ಜಮಾಯಿಸಿದವರ ಸಂಖ್ಯೆ 12,000ಕ್ಕೂ ಅಧಿಕವಾಗಿತ್ತು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮೂಲಗಳು ತಿಳಿಸಿವೆ.
BLACK DAY FOR DEMOCRACY
BRUTAL LATHI CHARGE AT JANTAR MANTAR pic.twitter.com/N6tFLmrUQe
— Cockroach is Back (@Cockroachisback) July 20, 2026
ಕೇಂದ್ರ ಸರ್ಕಾರದಿಂದ ಸಂಧಾನ?:
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರವು ಪ್ರತಿಭಟನಾಕಾರರನ್ನು ಮಾತುಕತೆಗೆ ಕರೆದಿದೆ ಎಂದು ಸಿಜೆಪಿ ಮೂಲಗಳು ತಿಳಿಸಿವೆ. ಸಂಘಟನೆಯ ಇಬ್ಬರು ವಕ್ತಾರರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
#WATCH | Delhi | Protesters gathered for CJP’s protest march clash with RPF personnel at Jantar Mantar; RPF personnel & police use lathis for crowd control pic.twitter.com/gijaCjJksW
— ANI (@ANI) July 20, 2026
ಪೊಲೀಸರ ಮೇಲೆ ಕಲ್ಲುತೂರಾಟ:
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿಯಿಂದ ಸಂಸತ್ ಭವನ ಚಲೋ ನಡೆದಿದೆ. ಜಂತರ್ ಮಂತರ್‌ನಲ್ಲಿ ಪೊಲೀಸರ ಮೇಲೆ ಪ್ರತಿಭಟನಾಕಾರರಿಂದ ಭಾರಿ ಕಲ್ಲುತೂರಾಟ ನಡೆದಿದೆ. ಹಲವು ಪೊಲೀಸರಿಗೆ ಗಾಯವಾಗಿದ್ದು, ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಲಾಠಿಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸುತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ ಭವನದ ಬಳಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಕಾಕ್ರೋಚ್ ಜನತಾ ಪಕ್ಷದ ‘ಚಲೋ ಸಂಸತ್’ ಮೆರವಣಿಗೆಗೆ ನಿರ್ಬಂಧ, ದಿಲ್ಲಿ ಪೊಲೀಸ್ ಖಡಕ್ ಎಚ್ಚರಿಕೆ
ದೆಹಲಿಯಲ್ಲಿ ಟ್ರಾಫಿಕ್ ಜಾಮ್:
ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳು ಬಂದ್ ಆಗಿವೆ. ಮೆಟ್ರೋ ನಿಲ್ದಾಣಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಂತರ್ ಮಂತರ್ನಿಂದ 4 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಸಿಜೆಪಿ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಸಿಜೆಪಿ ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
VIDEO | Delhi: On the CJP protest, Congress MP Renuka Chowdhury says, “Parliament is in session, and you are using tear gas against children. Is this how a government functions? Inside the House, they jammed our WhatsApp and closed the gates. What kind of government is this?… pic.twitter.com/4iCtIlaKAR
— Press Trust of India (@PTI_News) July 20, 2026
ಲಾಠಿಚಾರ್ಜ್ಗೆ ಕೇಜ್ರಿವಾಲ್ ಖಂಡನೆ:
ಪ್ರತಿಭಟನಾನಿರತರ ಮೇಲಿನ ಪೊಲೀಸ್ ಲಾಠಿಚಾರ್ಜ್ಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಲಕ್ಷಾಂತರ ಯುವಕರು ಸೇರಿದ್ದಾರೆ. ಆ ಯುವಕರ ಮಾತು ಕೇಳುವ ಬದಲು ಲಾಠಿಜಾರ್ಜ್ ಮಾಡಿದ್ದಾರೆ. ಇವರು ನಮ್ಮದೇ ದೇಶದ ಮಕ್ಕಳು. ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ದುರಹಂಕಾರವನ್ನು ಬದಿಗಿಟ್ಟು ಯುವಕರ ಮನವಿಯನ್ನು ಆಲಿಸಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:40 pm, Mon, 20 July 26