ದೆಹಲಿ, ಜುಲೈ 20: ಭಾರತದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಜಪಾನ್ನ ಔಷಧ ಕಂಪನಿ ಟಕೆಡಾ (Takeda) ಅಭಿವೃದ್ಧಿಪಡಿಸಿರುವ QDENGA ಲಸಿಕೆಗೆ ಅನುಮೋದನೆ ನೀಡಿದೆ. ಇದರೊಂದಿಗೆ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆ ಎಂಬ ಹೆಗ್ಗಳಿಕೆಗೆ QDENGA ಪಾತ್ರವಾಗಿದೆ. ಜಪಾನ್ನ ಟಕೆಡಾ ಫಾರ್ಮಾಸ್ಯೂಟಿಕಲ್ಸ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಡೆಂಗ್ಯೂ ವೈರಸ್ನ ನಾಲ್ಕೂ ವಿಧಗಳ ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸುವಲ್ಲಿ ಸಮರ್ಥವಾಗಿದೆ.
ಈ ಲಸಿಕೆಯ ವಿಶೇಷತೆ ಏನು?
ಈ ಹಿಂದೆ ಲಭ್ಯವಿದ್ದ Dengvaxia ಲಸಿಕೆ ಪಡೆಯುವ ಮೊದಲು ವ್ಯಕ್ತಿಗೆ ಹಿಂದೆ ಡೆಂಗ್ಯೂ ಸೋಂಕಾಗಿದೆಯೇ ಎಂಬುದನ್ನು ರಕ್ತ ಪರೀಕ್ಷೆಯ ಮೂಲಕ ದೃಢಪಡಿಸಬೇಕಾಗುತ್ತಿತ್ತು. ಆದರೆ QDENGAಗೆ ಅಂತಹ ಪರೀಕ್ಷೆಯ ಅಗತ್ಯವಿಲ್ಲ. ಹಿಂದೆ ಡೆಂಗ್ಯೂ ಬಂದಿರಲಿ ಅಥವಾ ಬರದಿರಲಿ, ಎರಡೂ ವರ್ಗದವರಿಗೆ ಈ ಲಸಿಕೆ ನೀಡಬಹುದಾಗಿದೆ. ಇದು ದೊಡ್ಡ ಪ್ರಮಾಣದ ಲಸಿಕಾ ಅಭಿಯಾನಗಳಿಗೆ ಅನುಕೂಲಕರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಡೆಂಗ್ಯೂ ಸೋಂಕು ಹೆಚ್ಚಿರುವ ದೇಶಗಳಲ್ಲಿ, ಸೊಳ್ಳೆ ನಿಯಂತ್ರಣ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ಕ್ರಮಗಳ ಜೊತೆಗೆ QDENGA ಬಳಕೆಯನ್ನು ಶಿಫಾರಸು ಮಾಡಿದೆ.
ಇದನ್ನೂ ಓದಿ: ಹೊಟ್ಟೆ ಸರಿಯಾಗಿ ಕ್ಲೀನ್ ಆಗದಿದ್ದರೆ ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡು ಮಲಬದ್ಧತೆಗೆ ಗುಡ್ಬೈ ಹೇಳಿ!
ಭಾರತಕ್ಕೆ ಈ ಅನುಮೋದನೆ ಏಕೆ ಮಹತ್ವದ್ದು?
ವರದಿಗಳ ಪ್ರಕಾರ, ಜಗತ್ತಿನ ಒಟ್ಟು ಡೆಂಗ್ಯೂ ಸೋಂಕುಗಳಲ್ಲಿ ಸುಮಾರು ಮೂರನೇ ಒಂದು ಭಾಗ ಭಾರತದಲ್ಲೇ ದಾಖಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು 11 ಪಟ್ಟು ಹೆಚ್ಚಾಗಿದ್ದು, ವಿಶೇಷವಾಗಿ ಮಳೆಗಾಲ ಹಾಗೂ ಮಳೆಗಾಲದ ನಂತರ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ಬಗಳ ಹೆಚ್ಚಿದೆ. ಹೀಗಾಗಿ ಈ ಲಸಿಕೆ ಭಾರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವರದಾನವಾಗು ನಿರೀಕ್ಷೆ ಇದೆ.
ಯಾರು ಈ ಲಸಿಕೆ ಪಡೆಯಬಹುದು?
ಇತರ ದೇಶಗಳಲ್ಲಿ ಈ ಲಸಿಕೆಯನ್ನು ಮಕ್ಕಳು ಹಾಗೂ ವಯಸ್ಕರಿಗೆ ಅನುಮೋದಿಸಲಾಗಿದೆ. ಆದರೆ ಭಾರತದಲ್ಲಿ ಇನ್ನೂ ಈ ಬಗ್ಗೆ ತೀರ್ಮಾನವಾಗಿಲ್ಲ. ಅಂತಿಮ ಮಾರ್ಗಸೂಚಿಯನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಜಪಾನ್ನ ಔಷಧ ಕಂಪನಿ ಟಕೆಡಾ ಪ್ರಕಟಿಸಬೇಕಿದೆ.
ಲಸಿಕೆಯ ಪರಿಣಾಮಕಾರಿತ್ವ ಎಷ್ಟು?
ಎಂಟು ಡೆಂಗ್ಯೂ ಪೀಡಿತ ದೇಶಗಳಲ್ಲಿ 20,000ಕ್ಕೂ ಹೆಚ್ಚು ಮಕ್ಕಳು ಹಾಗೂ ಹದಿಹರಿಯದವರನ್ನು ಒಳಗೊಂಡ TIDES Phase-III ಅಧ್ಯಯನದಲ್ಲಿ ಲಸಿಕೆಯ ಪರಿನಾಮಕಾರಿತ್ವ ಎಷ್ಟೆಂಬುದು ಬಹಿರಂಗಗೊಂಡಿದೆ. ಡೆಂಗ್ಯೂ ಕಾರಣ ಆಸ್ಪತ್ರೆ ಸೇರುವ ಅಪಾಯವನ್ನು ಶೇ. 84ರಷ್ಟು ಇದು ಕಡಿಮೆ ಮಾಡಿದ್ದು, ಒಟ್ಟಾರೆ ಡೆಂಗ್ಯೂ ಸೋಂಕಿನ ವಿರುದ್ಧ ಸುಮಾರು ಶೇ.61ರಷ್ಟು ರಕ್ಷಣೆ ನೀಡಿರೋ ಬಗ್ಗೆ ಅಂಕಿ-ಅಂಶಗಳು ದೊರೆತಿವೆ.
ಭಾರತದಲ್ಲಿ ಬೆಲೆ ಎಷ್ಟು?
ಭಾರತದಲ್ಲಿ ಇನ್ನೂ ಲಸಿಕೆಯ ಅಧಿಕೃತ ಬೆಲೆ ಪ್ರಕಟಿಸಲಾಗಿಲ್ಲ. ಆದರೆ ಹೈದರಾಬಾದ್ನ ಬಯಾಲಾಜಿಕಲ್ ಇ ಸಂಸ್ಥೆಯೊಂದಿಗೆ ಟಕೆಡಾ ಉತ್ಪಾದನಾ ಒಪ್ಪಂದ ಮಾಡಿಕೊಂಡಿದ್ದು, ದೇಶದಲ್ಲೇ ವರ್ಷಕ್ಕೆ 5 ಕೋಟಿ ಡೋಸ್ಗಳನ್ನು ಉತ್ಪಾದಿಸುವ ಯೋಜನೆಯಿದೆ. ಹೀಗಾಗಿ ಕಡಿಮೆ ಬೆಲೆಯಲ್ಲಿಯೇ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.