Headlines

ರಿಷಬ್ ಶೆಟ್ಟಿ ನಟನೆಯ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ‘ಗೇಮ್ ಆಫ್ ಥ್ರೋನ್ಸ್’ ಸಾಹಸ ನಿರ್ದೇಶಕ – Kannada News | Rishab Shetty Chhatrapati Shivaji Maharaj Game of Thrones Action Director Mark Henson

‘ಕಾಂತಾರ’ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ (Rishab Shetty) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬೃಹತ್ ಬಜೆಟ್‌ನ ಐತಿಹಾಸಿಕ ಸಿನಿಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಚಿತ್ರದ ಯುದ್ಧ ಮತ್ತು ಆ್ಯಕ್ಷನ್ ದೃಶ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಲು ಹಾಲಿವುಡ್‌ನ ಘಟಾನುಘಟಿ ಆ್ಯಕ್ಷನ್ ಡೈರೆಕ್ಟರ್‌ಗಳ ತಂಡ ಭಾರತಕ್ಕೆ ಆಗಮಿಸಿದೆ.

ಖ್ಯಾತ ಚಲನಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ನಿರ್ದೇಶನದ ಮಹತ್ವಾಕಾಂಕ್ಷಿ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕಾಗಿ ಜಗತ್ತಿನ ಅತಿ ದೊಡ್ಡ ವೆಬ್ ಸರಣಿ ಹಾಗೂ ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರನ್ನು ಕರೆತರಲಾಗಿದೆ. ಹಾಲಿವುಡ್‌ ಸಾಹಸ ನಿರ್ದೇಶಕರ ದಂಡು ಈ ಚಿತ್ರಕ್ಕಾಗಿ ಕೆಲಸ ಮಾಡಲಿದೆ. ಚಿತ್ರದ ಆ್ಯಕ್ಷನ್ ವಿಭಾಗವನ್ನು ಜಗತ್ತಿನ ಹೆಸರಾಂತ ಆ್ಯಕ್ಷನ್ ಡೈರೆಕ್ಟರ್‌ಗಳು ಮುನ್ನಡೆಸಲಿದ್ದಾರೆ.

ಘಟಾನುಘಟಿ ಸಾಹಸ ನಿರ್ದೇಶಕರು:

ಜಗತ್ಪ್ರಸಿದ್ಧ ವೆಬ್ ಸರಣಿಗಳಾದ ‘ಗೇಮ್ ಆಫ್ ಥ್ರೋನ್ಸ್’, ‘ವೈಕಿಂಗ್ಸ್’, ‘ದಿ ವಿಚರ್’ ಹಾಗೂ ಆಸ್ಕರ್ ವಿಜೇತ ‘ಗ್ರಾವಿಟಿ’ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ ಮಾರ್ಕ್ ಹೆನ್ಸನ್ ಈ ತಂಡದ ನೇತೃತ್ವ ವಹಿಸಿದ್ದಾರೆ. ‘ದಿ ಫೇಟ್ ಆಫ್ ದಿ ಫ್ಯೂರಿಯಸ್’, ‘ಬ್ಲಡ್‌ಶಾಟ್’ ಮತ್ತು ‘ಲೂಸಿಫರ್’ ಖ್ಯಾತಿಯ ವ್ಲಾಡ್ ರಿಂಬರ್ಗ್ ಕೂಡ ತಂಡದಲ್ಲಿದ್ದಾರೆ. ‘ಟ್ರಾಯ್: ಫಾಲ್ ಆಫ್ ಎ ಸಿಟಿ’ ಚಿತ್ರಕ್ಕೆ ಕೆಲಸ ಮಾಡಿದ ಕ್ರೇಗ್ ಮ್ಯಾಕ್ರೇ ಕೂಡ ರಿಷಬ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ.

500 ಕೋಟಿ ಬಜೆಟ್, ಎರಡು ಭಾಗಗಳಲ್ಲಿ ಸಿನಿಮಾ:

ಬರೋಬ್ಬರಿ 500 ಕೋಟಿ ರೂಪಾಯಿ ಭಾರಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಇದನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಬಾಲಿವುಡ್ ನಟರಾದ ಅರ್ಜುನ್ ರಾಂಪಾಲ್, ವಿವೇಕ್ ಒಬೆರಾಯ್ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜ್: ರಿಷಬ್ ಶೆಟ್ಟಿ ನಟನೆಯ 2 ಪಾರ್ಟ್ ಸಿನಿಮಾಗೆ 500 ಕೋಟಿ ಬಜೆಟ್

ಜಾಗತಿಕ ಮಟ್ಟದಲ್ಲಿ ರಿಲೀಸ್:

17ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ಇಂದಿಗೂ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ. 1923ರ ಮೂಕಿ ಚಿತ್ರ ‘ಸಿಂಹಗಡ’ದಿಂದ ಹಿಡಿದು ಇಂದಿನವರೆಗೆ ಅವರ ಜೀವನದ ಆಧಾರಿತ ಸುಮಾರು 60ಕ್ಕೂ ಹೆಚ್ಚು ಚಲನಚಿತ್ರ ಮತ್ತು ಧಾರಾವಾಹಿಗಳು ಬಂದಿವೆ. ಆದರೆ, ‘ದಿ ಪ್ರೈಡ್ ಆಫ್ ಭಾರತ್’ ಸಂಪೂರ್ಣ ಹೊಸ ದೃಷ್ಟಿಕೋನದಲ್ಲಿ ಜಾಗತಿಕ ವೀಕ್ಷಕರನ್ನು ಸೆಳೆಯಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *