ಬೆಂಗಳೂರು, ಜುಲೈ 21: ನಗರದ ದಕ್ಷಿಣ ನಗರ ಪಾಲಿಕೆಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಕಾವೇರಿ ನೀರು ಕಲುಷಿತಗೊಂಡು ಪೂರೈಕೆಯಾಗುತ್ತಿದ್ದು, ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪದೇ ಪದೇ ಪುನರಾವರ್ತಿತವಾಗುತ್ತಿರುವ ಈ ಸಮಸ್ಯೆಯಿಂದ ಕಾವೇರಿ ನೀರನ್ನು ನಂಬಿಕೊಂಡಿದ್ದ ಜನರಿಗೆ ದೊಡ್ಡ ಆಘಾತ ಉಂಟಾಗಿದೆ. ಕಲುಷಿತ ನೀರು ಮಣ್ಣು ಮಿಶ್ರಿತವಾಗಿದ್ದು, ಕೆಟ್ಟ ವಾಸನೆ ಹಾಗೂ ಕಪ್ಪು ಬಣ್ಣದಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕುಡಿಯಲು ಅಥವಾ ಇತರೆ ಗೃಹಬಳಕೆಗೆ ನೀರನ್ನು ಉಪಯೋಗಿಸಲು ಭಯವಾಗುತ್ತಿದೆ ಎಂದು ಜನ ಅಳಲು ತೋಡಿಕೊಂಡಿದ್ದಾರೆ. ಕೊಳಚೆ ನೀರು ಕಾವೇರಿ ನೀರಿನೊಂದಿಗೆ ಮಿಶ್ರಣವಾಗುತ್ತಿರುವುದು ಈ ಸಮಸ್ಯೆಗೆ ಮುಖ್ಯ ಕಾರಣ ಎನ್ನಲಾಗಿದೆ. ಹಿಂದೆ ಪೆಟ್ರೋಲ್, ಆಯಿಲ್ ಮಿಶ್ರಣವಾಗಿದ್ದರೆ, ಈಗ ಸ್ಯಾನಿಟರಿ ಲೈನ್‌ನ ನೀರು ಸೇರಿಕೊಳ್ಳುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಜಲಮಂಡಳಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಬಗ್ಗೆ ತೀವ್ರ ಚಿಂತೆಗೀಡಾಗಿದ್ದು, ಕೂಡಲೇ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.