ನವದೆಹಲಿ, ಜುಲೈ 21: ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಯುಪಿಐ (UPI) ಮೂಲಕ ಹಣ ಪಾವತಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ. ವಿಮಾನ ಪ್ರಯಾಣದ ವೇಳೆ (In-flight), ಅಂಡರ್ಗ್ರೌಂಡ್ ಮೆಟ್ರೋ ರೈಲುಗಳಲ್ಲಿ ಮತ್ತು ಇಂಟರ್ನೆಟ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿಯೂ ಸುಲಭವಾಗಿ ಪಾವತಿ ಮಾಡಲು ಈ ಸೌಲಭ್ಯ ನೆರವಾಗಲಿದೆ.
ಟ್ಯಾಪ್ ಟು ಪೇ: ಇಂಟರ್ನೆಟ್ ಇಲ್ಲದೆ ₹2,000 ವರೆಗಿನ ವಹಿವಾಟುಗಳನ್ನು ನಡೆಸಲು ಅವಕಾಶ ನೀಡುವಂತೆ ಯೋಜಿಸಲಾಗಿದೆ. ಎನ್ಎಫ್ಸಿ ಅಥವಾ ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ತಂತ್ರಜ್ಞಾನದ ಮೂಲಕ ಈ ಸೇವೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ಅನ್ನು ಪಾಯಿಂಟ್ ಆಫ್ ಸೇಲ್ (PoS) ಯಂತ್ರಕ್ಕೆ ಸ್ಪರ್ಶಿಸುವ (Tap) ಮೂಲಕ ಪಾವತಿಸಬಹುದು. ಇದು ‘UPI Lite’ ವಾಲೆಟ್ ಆಧಾರಿತ ವ್ಯವಸ್ಥೆಯಾಗುವುದರಿಂದ, ವಹಿವಾಟಿಗೆ ಯುಪಿಐ ಪಿನ್ (UPI PIN) ನಮೂದಿಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್ಲೈನ್ನಲ್ಲೇ ಪರಿಶೀಲಿಸಿ
ಇಂಟರ್ನೆಟ್ ಇಲ್ಲದೆ ಯುಪಿಐ ಹೇಗೆ ಕೆಲಸ ಮಾಡುತ್ತದೆ?
ಇಂಟರ್ನೆಟ್ ಇರುವಾಗ ಬಳಕೆದಾರರು ತಮ್ಮ UPI Lite ವಾಲೆಟ್‌ಗೆ ಹಣವನ್ನು ತುಂಬಿಕೊಳ್ಳಬೇಕು. ಇಂಟರ್ನೆಟ್ ಇಲ್ಲದಿದ್ದಾಗ, NFC ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ವ್ಯಾಪಾರಿಯ PoS ಯಂತ್ರಕ್ಕೆ ಟ್ಯಾಪ್ ಮಾಡಿದರೆ ವಹಿವಾಟು ಪೂರ್ಣಗೊಳ್ಳುತ್ತದೆ.
PoS ಯಂತ್ರವು ಈ ಪಾವತಿಯ ವಿವರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ ಮತ್ತು ಇಂಟರ್ನೆಟ್ ಸಂಪರ್ಕ ಸಿಕ್ಕ ತಕ್ಷಣ ನೆಟ್‌ವರ್ಕ್‌ನೊಂದಿಗೆ ಸಿಂಕ್ ಮಾಡಿಕೊಳ್ಳುತ್ತದೆ.
ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು
ಎರಡ್ಮೂರು ವರ್ಷಗಳ ಹಿಂದೆ ಎನ್ಪಿಸಿಐನಿಂದ ಯುಪಿಐ ಲೈಟ್ ಎಕ್ಸ್ ಫೀಚರ್ ಬಿಡುಗಡೆಯಾಗಿತ್ತು. ಇದು ಮೊಬೈಲ್ ಕನೆಕ್ಟಿವಿಟಿ ಇಲ್ಲದೆಯೇ ಆಫ್ಲೈನ್ನಲ್ಲಿ ಯುಪಿಐ ಲೈಟ್ ಮೂಲಕ ಪಾವತಿಸಬಹುದು. ಇಲ್ಲಿ ಪಾವತಿಸುವವರು ಮತ್ತು ಸ್ವೀಕರಿಸುವವರು, ಎರಡೂ ಕಡೆಯಲ್ಲೂ ಎನ್ಎಫ್ಸಿ ಎನೇಬಲ್ ಆಗಿರಬೇಕು.
ಈಗ ಎನ್ಪಿಸಿಐನವರು ಇದೇ ಫೀಚರ್ ಅನ್ನು ಪಿಒಎಸ್ಗಳಿಗೂ ವಿಸ್ತರಿಸುತ್ತಿದ್ದಾರೆ. ಅಂದರೆ, ಎನ್ಎಫ್ಸಿ ಎನೇಬಲ್ ಆಗಿರುವ ಪಿಒಎಸ್ಗಳಲ್ಲಿ ಇಂಟರ್ನೆಟ್ ಇಲ್ಲದೆಯೇ ಯುಪಿಐ ಲೈಟ್ ಮೂಲಕ ಹಣ ಪಾವತಿಸಬಹುದು. ಇಲ್ಲಿ ಪಿಒಎಸ್ ಮತ್ತು ಮೊಬೈಲ್ ಎರಡೂ ಕಡೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರೂ ಕೂಡ ಎನ್ಎಫ್ಸಿ ಸಹಾಯದಿಂದ ಪಾವತಿ ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ