ದಾವಣಗೆರೆ, (ಜುಲೈ 21): ದಾವಣಗೆರೆ ಜಿಲ್ಲಾ ಪೊಲೀಸರು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 87 ಪ್ರಕರಣಗಳನ್ನು ಭೇದಿಸಿದ್ದು, ಒಂದೂವರೆ ಕೆ.ಜಿ ಚಿನ್ನಾಭರಣ, ಹದಿನೆಂಟು ಕೆ.ಜಿ ಬೆಳ್ಳಿ, ಕಾರು, ಮೊಬೈಲ್ ಸೇರಿದಂತೆ ಒಟ್ಟು 3.91 ಕೋಟಿ ರೂಪಾಯಿ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಒಂದು ಅಂದರೆ 2025 ಡಿಸೆಂಬರ್ 20ರಿಂದ 2026 ಜುಲೈ 20ರ ತನಕ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವರದಿಯಾಗಿದ್ದ 87 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
3.91 ಕೋಟಿ ರೂ ಮೌಲ್ಯದ ವಸ್ತುಗಳನ್ನು ಜಪ್ತಿ
ಇನ್ನು 3.91 ಕೋಟಿ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದು, ಆ 1.66 ಕೆಜಿ ಚಿನ್ನ, 56.55 ಲಕ್ಷ ಮೌಲ್ಯದ ಮೊಬೈಲ್ಗಳು, 18.56 ಕೆಜಿ ಬೆಳ್ಳಿ, 4 ಲಕ್ಷ ಮೌಲ್ಯದ ಕೃಷಿ ಸಾಮಗ್ರಿಗಳು 22.94 ಲಕ್ಷ ರೂ. ಮೌಲ್ಯದ 31 ವಾಹನಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 26.6 ಕೋಟಿ ಡ್ರಗ್ಸ್, ನಕಲಿ ನೋಟು ಪ್ರಿಂಟಿಂಗ್ ಜಾಲ ಭೇದಿಸಿದ ಪೊಲೀಸರು
2 ಸಾವಿರ ಹೆಲ್ಮೆಟ್, 85 ಸೈಲೆನ್ಸರ್, ಹಾರ್ನ್ಸ್, ಸ್ಪೀಕರ್ ಡಕ್ ನಾಶ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳಿಗೆ ಅಳವಡಿಸಿದ್ದ ಕಳಪೆ ಗುಣಮಟ್ಟದ ಸುಮಾರು 2,000ಕ್ಕೂ ಹೆಚ್ಚು ಆಫ್ ಹೆಲ್ಮೆಟ್ಗಳು, ದ್ವಿಚಕ್ರ ವಾಹನಗಳಲ್ಲಿ ಆಳವಡಿಸಿಕೊಂಡಿದ್ದ ಕರ್ಕಶ ಧ್ವನಿ ಮಾಡುವ 85ಕ್ಕೂ ಹೆಚ್ಚು ಡಿಫೆಕ್ಟಿವ್ ಸೈಲೆನ್ಸರ್ಗಳು, ಇತರೆ ವಾಹನಗಳಲ್ಲಿ ಆಳವಡಿಸಿಕೊಂಡಿದ್ದ 25 ಹಾರ್ನ್ಗಳನ್ನು ಮತ್ತು 10 ಸ್ಪೀಕರ್ ಡಕ್ಗಳನ್ನು ಬುಲ್ಡೋಜರ್ ಮೂಲಕ ಎಸ್ಪಿ ಶೇಖರ್ ಹೆಚ್.ಟಿ. ಅವರ ಸಮ್ಮುಖದಲ್ಲಿ ಪೊಲೀಸರು ನಾಶಪಡಿಸಿದರು.
ಎಸ್ಪಿ ಶ್ಲಾಘನೆ
ಇನ್ನು ಈ ಬಗ್ಗೆ ಎಸ್ಪಿ ಶೇಖರ್ ಹೆಚ್.ಟಿ. ಅವರು ಮಾತನಾಡಿ, “ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದ ವಸ್ತುಗಳು ಹಿಂದಿರುಗಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈ ಪ್ರಾಪರ್ಟಿ ಪರೇಡ್ನಲ್ಲಿ ಜಪ್ತಿ ಪಡಿಸಿಕೊಂಡಿದ್ದ ಒಟ್ಟು 87 ಪ್ರಕರಣಗಳಿಗೆ ಸಂಬಂಧಿಸಿದಂತೆ 22.94 ಲಕ್ಷ ಮೌಲ್ಯದ ವಿವಿಧ ಮಾದರಿಯ 31 ವಾಹನಗಳು, 90.67 ಲಕ್ಷ ನಗದು ಹಣ, 2.17 ಕೋಟಿ ಮೌಲ್ಯದ 1668.314 ಗ್ರಾಂ ಬಂಗಾರದ ಆಭರಣಗಳು ಹಾಗು 18.569 ಕೆ.ಜಿ. ಬೆಳ್ಳಿ, ಮೊಬೈಲ್, 56.55 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ 377 ಮೊಬೈಲ್ ಪೋನ್ಗಳು, 4,87 ಲಕ್ಷ ಮೌಲ್ಯದ ಕೃಷಿ ಉಪಕರಣಗಳು, ಅಡಿಕೆ, ಬೋರವೆಲ್ ವೈರ್, ಮೋಟರ್ ಮತ್ತು ಇತರೆ ವಸ್ತುಗಳು ಸೇರಿ ಒಟ್ಟು 3,91,69,136 ಮೌಲ್ಯದ ಸ್ವತ್ತು ಕಳವು ಪ್ರಕರಣಗಳಲ್ಲಿನ ವಸ್ತುಗಳನ್ನು ವಶಕ್ಕೆ ಪಡೆದು ವಾರಸುದಾರಿಗೆ ಹಸ್ತಾಂತರ ಮಾಡಿದ್ದೇವೆ ಎಂದು ವಿವರಿಸಿದರು.
ಐಎಸ್ಐ ಮಾರ್ಕ್ ಇಲ್ಲದ ಆಫ್ ಹೆಲ್ಮೆಟ್ಗಳು, ಸೈಲೆನ್ಸರ್ಗಳು, ಕರ್ಕಶ ಶಬ್ದದ ಹಾರ್ನ್ ಹಾಗು ಡಕ್ಗಳನ್ನು ಬುಲ್ಡೋಜರ್ ಸಹಾಯದಿಂದ ನಾಶ ಪಡಿಸಲಾಗಿದೆ. ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು, ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ” ಎಂದು ಶ್ಲಾಘಿಸಿದರು.