ನವದೆಹಲಿ, ಜುಲೈ 22: ಭಾರತದ ವಿವಿಧ ಕ್ಷೇತ್ರಗಳಿಗೆ ವಿದೇಶೀ ನೇರ ಹೂಡಿಕೆಗಳು (FDI- Foreign Direct Investment) ಭರಪೂರವಾಗಿ ಹರಿದುಬರುವುದು ಮುಂದುವರಿದಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ (Jitin Prasada) ಅವರು 2020-21ರಿಂದ 2025-26ರವರೆಗೆ ಭಾರತದಲ್ಲಿ ರಾಜ್ಯವಾರು ಎಫ್ಡಿಐ ಹರಿವಿನ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಕರ್ನಾಟಕದಲ್ಲಿ ಎಫ್ಡಿಐ ಹರಿವು ಸಖತ್ ಏರಿಕೆಯಾಗಿದೆ. ಮಹಾರಾಷ್ಟ್ರದ ನಂತರ ಅತಿಹೆಚ್ಚು ಎಫ್ಡಿಐ ಪಡೆದಿರುವ ರಾಜ್ಯವೆಂದರೆ ಕರ್ನಾಟಕ.
ಎಫ್ಡಿಐ, ಎರಡನೇ ಸ್ಥಾನಕ್ಕೆ ಏರಿದ ಕರ್ನಾಟಕ
2025-26ರಲ್ಲಿ ಕರ್ನಾಟಕಕ್ಕೆ 12.94 ಬಿಲಿಯನ್ ಡಾಲರ್ನಷ್ಟು (ಸುಮಾರು 1.25 ಲಕ್ಷ ಕೋಟಿ ರೂ) ಎಫ್ಡಿಐ ಬಂದಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ವಿದೇಶೀ ಹೂಡಿಕೆಗಳು ದುಪ್ಪಟ್ಟಾಗಿವೆ. ಭಾರತಕ್ಕೆ ಬಂದ ಒಟ್ಟು ಎಫ್ಡಿಐನಲ್ಲಿ ಕರ್ನಾಟಕಕ್ಕೆ ಸಿಕ್ಕ ಪಾಲು ಶೇ. 21.99. ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಂ. 2 ಎನಿಸಿದೆ.
2025-26ರಲ್ಲಿ ಅತಿಹೆಚ್ಚು ಎಫ್ಡಿಐ ಪಡೆದ ರಾಜ್ಯಗಳು
- ಮಹಾರಾಷ್ಟ್ರ: 18.42 ಬಿಲಿಯನ್ ಡಾಲರ್
- ಕರ್ನಾಟಕ: 12.94 ಬಿಲಿಯನ್ ಡಾಲರ್
- ಕೇಂದ್ರಾಡಳಿತ ಪ್ರದೇಶಗಳು: 6.37 ಬಿಲಿಯನ್ ಡಾಲರ್
- ಗುಜರಾತ್: 5.71 ಬಿಲಿಯನ್ ಡಾಲರ್
- ತಮಿಳುನಾಡು: 4.72 ಬಿಲಿಯನ್ ಡಾಲರ್
- ಹರ್ಯಾಣ: 4.53 ಬಿಲಿಯನ್ ಡಾಲರ್
- ತೆಲಂಗಾಣ: 2.25 ಬಿಲಿಯನ್ ಡಾಲರ್
- ರಾಜಸ್ಥಾನ: 1.01 ಬಿಲಿಯನ್ ಡಾಲರ್
- ಉತ್ತರಪ್ರದೇಶ: 950 ಮಿಲಿಯನ್ ಡಾಲರ್
- ಆಂಧ್ರಪ್ರದೇಶ: 609 ಮಿಲಿಯನ್ ಡಾಲರ್
ಇಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ, ಚಂಡೀಗಡ ನಗರಗಳೂ ಸೇರುತ್ತವೆ. ಹೀಗಾಗಿ, ಅತಿಹೆಚ್ಚು ಹೂಡಿಕೆ ಪಡೆದಿರುವ ರಾಜ್ಯಗಳ ಪಟ್ಟಿಯಲ್ಲಿ ಇದು ಸೇರಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್, ಈ ಮೂರು ರಾಜ್ಯಗಳು ಶೇ. 50ರಷ್ಟು ಎಫ್ಡಿಐ ಆಕರ್ಷಿಸಿವೆ.
ಇದನ್ನೂ ಓದಿ: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ
ಭಾರತಕ್ಕೆ ಕಳೆದ ಎರಡು ವರ್ಷದಿಂದ ವಿದೇಶೀ ಹೂಡಿಕೆಗಳ ಒಳಹರಿವು ಹೆಚ್ಚುತ್ತಿದೆ. ಕೋವಿಡ್ಗಿಂತ ಮುಂಚೆ ಭಾರತಕ್ಕೆ ಬಂದ ವಿದೇಶೀ ಹೂಡಿಕೆಯು ಜಿಡಿಪಿ ಶೇ. 2.4ರಷ್ಟಿತ್ತು. 2024ರಲ್ಲಿ ಅದು ಶೇ. 0.7ಕ್ಕೆ ಕುಸಿಯಿತು. ನಂತರ 2025ರಲ್ಲಿ ಅದು ಶೇ. 1 ಮುಟ್ಟಿತು. ಈಗ ಅದು ಇನ್ನಷ್ಟು ಏರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ