Headlines

ಭತ್ತದ ಗದ್ದೆಯಲ್ಲಿ ಅರಳಿದ ಅದೃಷ್ಟದ ತಾವರೆ: ಕೃಷಿಯಲ್ಲಿ ಹೊಸ ಕ್ರಾಂತಿ ಮಾಡಿದ ಮನೋಹರ ಶೆಟ್ಟಿ – Kannada News | Commercial Lotus Farming in Udupi: Manohar Shetty’s Organic Success Story and High Income

ಉಡುಪಿ, ಜು.22: ಒಂದು ಕಾಲದಲ್ಲಿ ಭತ್ತದ ಹಸಿರು ಹೊದಿಕೆ ಹೊದ್ದಿದ್ದ ಗದ್ದೆ, ಇಂದು ಗುಲಾಬಿ ಮತ್ತು ಬಿಳಿ ಬಣ್ಣದ ತಾವರೆ ಹೂಗಳಿಂದ ಕಂಗೊಳಿಸುತ್ತಿದೆ. ಬೆಳಗಿನ ಜಾವ ನೀರಿನ ಮೇಲೆ ಅರಳಿದ ನೂರಾರು ತಾವರೆ ಹೂಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದ್ದರೆ, ಈ ಸಾಹಸಕ್ಕೆ ಕೈಹಾಕಿದ ರೈತನ ಮುಖದಲ್ಲಿನ ಮಂದಹಾಸ ನೂತನ ಯಶಸ್ಸಿನ ಕಥೆಯನ್ನು ಸಾರುತ್ತಿದೆ.

ಮಂಡ್ಯ, ಮೈಸೂರು ಹಾಗೂ ರಾಮನಗರ ಭಾಗಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತಿದ್ದ ‘ವಾಣಿಜ್ಯ ತಾವರೆ ಕೃಷಿ’ ಇದೀಗ ಕರಾವಳಿಯ ಕೃಷಿ ನೆಲದಲ್ಲೂ ಹೊಸ ನೆಲೆ ಕಂಡುಕೊಂಡಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಳಿಯಾರಗೋಳಿಯ ರೈತ ಹಾಗೂ ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮನೋಹರ ಶೆಟ್ಟಿ ಅವರು ತಮ್ಮ ಭತ್ತದ ಗದ್ದೆಯನ್ನು ತಾವರೆ ಕೊಳವನ್ನಾಗಿ ಪರಿವರ್ತಿಸಿ, ಕರಾವಳಿಯಲ್ಲೂ ತಾವರೆ ಕೃಷಿ ಲಾಭದಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.

Dupi Farmer Earns 1 Lakh Month (2)

ವರ್ಷಗಳಿಂದ 15–20 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುತ್ತಿದ್ದರೂ ಮಳೆ ವೈಪರೀತ್ಯ, ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ವೆಚ್ಚದಿಂದಾಗಿ ನಷ್ಟ ಅನುಭವಿಸುತ್ತಿದ್ದರು. ಮಾಧ್ಯಮಗಳಲ್ಲಿ ತಾವರೆ ಕೃಷಿಯ ಯಶೋಗಾಥೆಗಳನ್ನು ಕಂಡು, ಮೂರು ತಿಂಗಳ ಕಾಲ ಅಧ್ಯಯನ ನಡೆಸಿ ತಮ್ಮ ಗದ್ದೆಯಲ್ಲೇ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಆರಂಭಿಸಿದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ಇಡೀ ಭತ್ತದ ಗದ್ದೆಯನ್ನು ತಾವರೆ ಕೊಳವಾಗಿ ರೂಪಾಂತರಿಸಿದರು.

Dupi Farmer Earns 1 Lakh Month (1)

3 ಎಕರೆಯಲ್ಲಿ ಅರಳಿದ ತಾವರೆ: ತಿಂಗಳಿಗೆ ಲಕ್ಷ ರೂ. ಆದಾಯ

ಪ್ರಸ್ತುತ 3 ಎಕರೆ ಪ್ರದೇಶದಲ್ಲಿ ಕರಾವಳಿಯ ಹವಾಮಾನಕ್ಕೆ ಹೊಂದುವ ಬುಚಾ, ಪಿಂಕ್ ಕ್ಲೌಡ್ ಹಾಗೂ ವೈಟ್ ಫಿಯೋನಿ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸಲಾಗಿದೆ. ಗದ್ದೆಯನ್ನು ಉಳುಮೆ ಮಾಡಿ, ಹಟ್ಟಿಗೊಬ್ಬರ ಹಾಕಿ, ಮೊಣಕಾಲಿನಷ್ಟು ನೀರು ಸಂಗ್ರಹಿಸಿ ಗಿಡಗಳನ್ನು ನೆಟ್ಟ ಬಳಿಕ ಸುಮಾರು 90 ದಿನಗಳಲ್ಲಿ ಮೊದಲ ಹೂ ಅರಳುತ್ತದೆ. ಕಳೆದ ಎರಡು ತಿಂಗಳಿಂದ ಪ್ರತಿದಿನ ಸರಾಸರಿ 400–500 ಹೂಗಳನ್ನು ಕೊಯ್ಲು ಮಾಡಲಾಗುತ್ತಿದ್ದು, ಒಂದು ಹೂವಿಗೆ 15 ರಂತೆ ತಿಂಗಳಿಗೆ 1 ಲಕ್ಷ ರೂ.ವರೆಗೆ ಆದಾಯ ಗಳಿಸುವ ನಿರೀಕ್ಷೆಯಿದೆ.

Dupi Farmer Earns 1 Lakh Month (3)

ದೇವಸ್ಥಾನಗಳಿಂದ ಭಾರಿ ಬೇಡಿಕೆ

ಇಲ್ಲಿ ಬೆಳೆಯುವ ತಾವರೆ ಹೂಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ, ಉಚ್ಚಿಲ ಹಾಗೂ ಕಾಪು ಭಾಗದ ಪ್ರಸಿದ್ಧ ದೇವಸ್ಥಾನಗಳಿಂದ ನಿರಂತರ ಬೇಡಿಕೆ ಬಂದಿದೆ. ಉಡುಪಿ ಹಾಗೂ ಕಾಪು ಭಾಗದ ಹೂವಿನ ವ್ಯಾಪಾರಿಗಳು ನೇರವಾಗಿ ತೋಟಕ್ಕೇ ಬಂದು ಹೂಗಳನ್ನು ಖರೀದಿಸುತ್ತಿದ್ದಾರೆ.

ಇದನ್ನೂ ಓದಿ: ಸಂಶೋಧಕರ ಹೆಜ್ಜೆಸದ್ದು ಕೇಳ್ಬೇಕಿದ್ದ ಜಾಗದಲ್ಲಿ ಅನೈತಿಕ ಚಟುವಟಿಕೆ: ಬೆಳಪು ಗ್ರಾಮೀಣ ವಿದ್ಯಾರ್ಥಿಗಳ ಕನಸು ಭಗ್ನ

ರಾಸಾಯನಿಕ ರಹಿತ ಸಾವಯವ ಪದ್ಧತಿ

ತೋಟದಲ್ಲಿ ಯಾವುದೇ ರಾಸಾಯನಿಕ ಕೀಟನಾಶಕ ಬಳಸದೆ ಕಹಿಬೇವಿನ ಹಿಂಡಿಯನ್ನು ಬಳಸಿ ಸಾವಯವ ಪದ್ಧತಿಯಲ್ಲಿ ಕೀಟ ನಿಯಂತ್ರಣ ಮಾಡಲಾಗುತ್ತಿದೆ. ತಾವರೆ ಹೂವಷ್ಟೇ ಅಲ್ಲದೆ, ಸುಗಂಧ ದ್ರವ್ಯ, ಅಲಂಕಾರಿಕ ವಸ್ತುಗಳು, ಕಾಂಡದ ನಾರಿನಿಂದ ಬಟ್ಟೆ, ಬೇರಿನಿಂದ ಉಪ್ಪಿನಕಾಯಿ ಹಾಗೂ ಬೀಜಗಳಿಂದ ಪೌಷ್ಟಿಕ ಆಹಾರ ತಯಾರಿಸಬಹುದಾಗಿದೆ. ಕಾಪು-ಉಳಿಯಾರಗೋಳಿ-ಪಾಂಗಾಳ ಭಾಗದಲ್ಲಿ ಸುಮಾರು 200 ಎಕರೆ ಕೃಷಿಭೂಮಿ ತಾವರೆಗೆ ಸೂಕ್ತವಾಗಿದ್ದು, ಆಸಕ್ತ ರೈತರಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಮನೋಹರ ಶೆಟ್ಟಿ ಮುನ್ನೆಡೆದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *