ಬೆಳಗಾವಿ/ಬಾಗಲಕೋಟೆ, ಜುಲೈ 23: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇದರಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ ಒಂದೇ ದಿನದಲ್ಲಿ 10,000 ಕ್ಯೂಸೆಕ್ ನೀರು ಒಳಹರಿವು ಹೆಚ್ಚಳವಾಗಿದ್ದು, ವೇದಗಂಗಾ, ದೂಧಗಂಗಾ ನದಿಗಳಲ್ಲೂ ನೀರಿನ ಮಟ್ಟ ಏರಿದೆ. ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ಹಲವು ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಬಳಿಯ ಘಟಪ್ರಭಾ ನದಿಯ ಸಿದ್ದೇಶ್ವರ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದ್ದು, ಅದರ ಮೇಲೆ ಸುಮಾರು 2 ಅಡಿ ನೀರು ಹರಿಯುತ್ತಿದೆ. ಕೆಲ ದಿನಗಳ ಹಿಂದೆ 250 ಕ್ಯೂಸೆಕ್ಗೆ ಇಳಿದಿದ್ದ ನದಿಯ ಹರಿವು ಈಗ ಮತ್ತೆ ಜೀವಕಳೆ ಪಡೆದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಮುಧೋಳ ನಗರದ ಚರಂಡಿ ನೀರು ನದಿಗೆ ಸೇರಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.