ಪ್ರಾತಿನಿಧಿಕ ಚಿತ್ರImage Credit source: Getty images
ಧಾರವಾಡ, ಜುಲೈ 23: ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಹೋದಾಗ ಹಣ ನೀಡದೆ ನಿರಾಕರಿಸಿದ ಧಾರವಾಡದ ವಿ.ಎಸ್. ಸಾಧುನವರ್ ಸೊಸೈಟಿಗೆ ಜಿಲ್ಲಾ ಗ್ರಾಹಕರ ಆಯೋಗವು (Dharwad Consumer Commission) ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಜೊತೆಗೆ ದಂಡ (fine) ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಪರಿಹಾರವಾಗಿ 50 ಸಾವಿರ ರೂ ಮತ್ತು ಪ್ರಕರಣದ ವೆಚ್ಚ 10 ಸಾವಿರ ರೂ ಸೇರಿ ಒಟ್ಟು 60 ಸಾವಿರ ರೂ ನೀಡುವಂತೆ ಖಡಕ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ಹುಬ್ಬಳ್ಳಿಯ ನಿವಾಸಿ ಕೋಮಲಾ ಜಾರತರಗರ್ ಎಂಬುವವರು ಧಾರವಾಡದ ವಿ.ಎಸ್. ಸಾಧುನವರ್ ಸೊಸೈಟಿಯ ತಮ್ಮ ಉಳಿತಾಯ ಖಾತೆಯಲ್ಲಿ 2.40 ಲಕ್ಷ ರೂ ಹಣ ಇಟ್ಟಿದ್ದರು. ಅಗತ್ಯವಿದ್ದಾಗ ತಮ್ಮ ಖಾತೆಯಲ್ಲಿದ್ದ ಹಣವನ್ನು ನೀಡುವಂತೆ ಕೋಮಲಾ ಸೊಸೈಟಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಹಣ ನೀಡಲು ಆಡಳಿತ ಮಂಡಳಿ ನಿರಾಕರಿಸಿತ್ತು. ಇದರಿಂದ ಬೇಸತ್ತ ಕೋಮಲಾ 2026ರ ಫೆಬ್ರವರಿ 2ರಂದು ಸೊಸೈಟಿ ಮತ್ತು ಅದರ ಅಧ್ಯಕ್ಷ ವಿ.ಎಸ್. ಸಾಧುನವರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕಲಬುರಗಿಯಲ್ಲಿ 300ಕ್ಕೂ ಅಧಿಕ ಮನೆಗಳ ತೆರವಿಗೆ ಕೋರ್ಟ್ ಆದೇಶ: ಆತಂಕದಲ್ಲಿ ನಿವಾಸಿಗಳು; ಆಗಿದ್ದೇನು?
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರನ್ನೊಳಗೊಂಡ ಪೀಠವು ಗ್ರಾಹಕರ ಪರ ತೀರ್ಪು ನೀಡಿದೆ. ಕೋಮಲಾ ಖಾತೆಯಲ್ಲಿದ್ದ 2.40 ಲಕ್ಷ ರೂ ಹಣವನ್ನು ಬಡ್ಡಿ ಸಮೇತ ತಕ್ಷಣವೇ ಮರಳಿಸುವಂತೆ ಸೂಚಿಸಿದ್ದಾರೆ.
60 ಸಾವಿರ ರೂ ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶ
ಅಷ್ಟೇ ಅಲ್ಲದೆ ಗ್ರಾಹಕರಿಗೆ 50 ಸಾವಿರ ರೂ ಪರಿಹಾರ ಹಾಗೂ ಪ್ರಕರಣದ ಕಾನೂನು ವೆಚ್ಚವಾಗಿ 10 ಸಾವಿರ ರೂ ಸೇರಿದಂತೆ ಒಟ್ಟು 60 ಸಾವಿರ ರೂ ಹೆಚ್ಚುವರಿಯಾಗಿ ಪಾವತಿಸುವಂತೆ ವಿ.ಎಸ್.ಸಾಧುನವರ್ ಸೊಸೈಟಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:28 pm, Thu, 23 July 26