ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ ವಿರುದ್ಧ ಅವರ ಮಾಜಿ ಪತ್ನಿ, ನಟಿ ಇವಾ ಗ್ರೋವರ್ ಅತ್ಯಂತ ಆಘಾತಕಾರಿ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಮತ್ತು ಮನೆ ನಡೆಸಲು ಪತಿ ತಮಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. ಇವಾ ಅವರ ಈ ಮಾತುಗಳು ಈಗ ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿದೆ.
ಖ್ಯಾತ ನಿರೂಪಕ ಸಿದ್ದಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಇವಾ ಗ್ರೋವರ್ ಈ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ದೈಹಿಕ ಸಂಬಂಧ ಹೊಂದುವಂತೆ ಪತಿ ಹೈದರ್ ತಮ್ಮ ಮೇಲೆ ತೀವ್ರ ಒತ್ತಡ ಹೇರುತ್ತಿದ್ದರು ಎಂದು ಇವಾ ಹೇಳಿದ್ದಾರೆ.
ಮನೆ ನಡೆಸಲು ಹಣವಿಲ್ಲದ ಕಾರಣಕ್ಕೆ ಪತಿ ಈ ರೀತಿ ಮಾಡುತ್ತಿದ್ದಾಗಿ ಇವಾ ತಿಳಿಸಿದ್ದಾರೆ. ‘ಮನೆಯ ಕರೆಂಟ್ ಬಿಲ್ ಕಟ್ಟಲು ಹಣವಿಲ್ಲ. ಮಗುವಿನ ಖರ್ಚಿಗೆ ಹಣ ಬೇಕು. ಆಫರ್ ಬಂದಾಗ ನಿರ್ದೇಶಕರ ಜೊತೆ ಮಲಗಿದರೆ ಏನಂತೆ? ಒಪ್ಪಿಕೋ, ಮನೆ ನಡೆಸಬೇಕಲ್ಲ’ ಎಂದು ಪತಿ ಹೇಳುತ್ತಿದ್ದ ಘಟನೆಯನ್ನು ಇವಾ ನೆನೆದಿದ್ದಾರೆ. ಈ ಮಾತಿನ ನಂತರ ಪತಿಯ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡಿದ್ದಾಗಿ ಹೇಳಿದ್ದಾರೆ.
‘ಪತಿ ಹೈದರ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಇವಾ ಹೇಳಿದ್ದಾರೆ. ಮದುವೆಯಾದ ಹೊಸರಲ್ಲೇ ಪತಿ ತಮ್ಮ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದರು. ಮೈ ಮೇಲಿನ ಗಾಯದ ಗುರುತುಗಳನ್ನು ನೋಡಿ ತಮ್ಮ ಪೋಷಕರು ಕಣ್ಣೀರು ಹಾಕುತ್ತಿದ್ದರು’ ಎಂದು ಇವಾ ಹಳಹಳಿಸಿದ್ದಾರೆ. ಪ್ರಸ್ತುತ ಹೈದರ್ ಅತ್ಯಂತ ಕಡುಬಡತನದಲ್ಲಿದ್ದಾರೆ.
ಇದನ್ನೂ ಓದಿ: ಊಟಕ್ಕೂ ಪರದಾಡುತ್ತಿದ್ದಾರೆ ಆಮಿರ್ ಖಾನ್ ಸಹೋದರ, ಗುಡಿಸಿಲಿನಲ್ಲಿ ವಾಸ
ಆಮಿರ್ ಖಾನ್ ಅವರ ತಂದೆ ತಾಹಿರ್ ಹುಸೇನ್ ಅವರ ಎರಡನೇ ಪತ್ನಿಯ ಮಗ ಹೈದರ್ ಅಲಿ ಖಾನ್ ಅವರು. ಈ ಹಿನ್ನೆಲೆಯಲ್ಲಿ ಇವರು ಆಮಿರ್ ಖಾನ್ ಅವರ ಮಲ ಸಹೋದರನಾಗುತ್ತಾರೆ. ಆದರೆ ಆಮಿರ್ ಖಾನ್ ಕುಟುಂಬಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದು ವರದಿಗಳು ಹೇಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.