ಮುಂಬೈ, ಜುಲೈ 26: ತನ್ನ ಪತಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುವ ಮಹಿಳೆಯೊಬ್ಬರ ಮಧ್ಯಂತರ ಜೀವನಾಂಶ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಪತಿಯ ಐಟಿ ಉದ್ಯೋಗವೇ ಅಪಾಯದಲ್ಲಿದೆ ಎಂದು ನ್ಯಾಯಾಲಯ ಮುಖ್ಯವಾಗಿ ಉಲ್ಲೇಖಿಸಿದೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಈ ಮಹಿಳೆ ತಿಂಗಳಿಗೆ ಸುಮಾರು 8 ಲಕ್ಷ ರೂ. ಗಳಿಸುತ್ತಿದ್ದಾರೆ. ಇದು ಅವರ ಪತಿಯ ಆದಾಯಕ್ಕಿಂತ ಹೆಚ್ಚಾಗಿದೆ. ಮಹಿಳೆಯು ತನಗೆ ಜೀವನಾಂಶವಾಗಿ ತಿಂಗಳಿಗೆ 1 ಲಕ್ಷ ರೂ. ನೀಡಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿದೇಶದಲ್ಲಿದ್ದರೆ ಜೀವನ ವೆಚ್ಚ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆ ಮತ್ತು ಐಟಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಪತಿಯ ಕೆಲಸ ಯಾವಾಗ ಬೇಕಾದರೂ ಅಪಾಯಕ್ಕೆ ಸಿಲುಕಬಹುದು ಎಂದು ಕೋರ್ಟ್ ಗಮನಿಸಿದೆ.
ಮತ್ತಷ್ಟು ಓದಿ: ಡಿವೋರ್ಸ್ ಪ್ರಕರಣಗಳಲ್ಲಿ ಕೋರ್ಟ್ ಜೀವನಾಂಶದ ಮೊತ್ತವನ್ನು ಹೇಗೆ ನಿರ್ಧರಿಸುತ್ತವೆ? ಪುರುಷರು ಜೀವನಾಂಶ ಪಡೆಯಬಹುದೇ?
ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿ, ಮೊಕದ್ದಮೆ ವೆಚ್ಚವಾಗಿ ಪತಿಗೆ 25,000 ರೂ. ನೀಡಲು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ದಂಪತಿಯ ಹಿರಿಯ ಮಗು ತಂದೆಯ ಬಳಿ ಹಾಗೂ ಕಿರಿಯ ಮಗು ತಾಯಿಯ ವಶದಲ್ಲಿದೆ.
ಕಾಯ್ದೆಯಡಿ ನಿಯಮ: ಭಾರತೀಯ ಕುಟುಂಬ ಕಾನೂನುಗಳ ಪ್ರಕಾರ (ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24), ಮಧ್ಯಂತರ ಜೀವನಾಂಶವನ್ನು ಸ್ವಂತ ಆದಾಯವಿಲ್ಲದ ಅಥವಾ ಜೀವನ ನಡೆಸಲು ಸಾಕಷ್ಟಿಲ್ಲದ ಸಂಗಾತಿಗೆ ನೀಡಲಾಗುತ್ತದೆ. ಸಂಗಾತಿಯೇ ಸ್ವಾವಲಂಬಿಯಾಗಿದ್ದು, ಉತ್ತಮ ಆದಾಯ ಹೊಂದಿದ್ದರೆ ಜೀವನಾಂಶಕ್ಕೆ ಅರ್ಹರಾಗುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಭಾರತದ ವಿವಿಧ ಹೈಕೋರ್ಟ್ಗಳು ಮತ್ತು ಸರ್ವೋಚ್ಚ ನ್ಯಾಯಾಲಯವು ‘ಉತ್ತಮ ಶಿಕ್ಷಣ ಪಡೆದು ಕೆಲಸ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವತಂತ್ರ ಆದಾಯವಿರುವ ಸಂಗಾತಿಗೆ ಜೀವನಾಂಶ ನೀಡುವುದು ಕಡ್ಡಾಯವಲ್ಲ’ ಎಂದು ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ