ಪತ್ತೆಯಾಗಿರುವ ‘ಹುಲಿಬೇಟೆ ವೀರಗಲ್ಲು
Image Credit source: The New Indian Express
ಬೆಂಗಳೂರು, ಜುಲೈ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಅಪರೂಪದ ‘ಹುಲಿಬೇಟೆ ವೀರಗಲ್ಲು’ ಪತ್ತೆಯಾಗಿದೆ. ಸುಮಾರು ಕ್ರಿ.ಶ. 850ರ ಅವಧಿಗೆ ಸೇರಿದ ಈ ವೀರಗಲ್ಲು ಕನ್ನಡದ ಇತಿಹಾಸದಲ್ಲಿ ಮಹತ್ವದ ಆವಿಷ್ಕಾರವೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 8 ಅಡಿ ಉದ್ದ ಮತ್ತು 2.5 ಅಡಿ ಅಗಲ ಹೊಂದಿರುವ ಈ ವೀರಗಲ್ಲು, ರೈತ ರಂಗಸ್ವಾಮಯ್ಯ ತಮ್ಮ ಜಮೀನಿನಲ್ಲಿದ್ದ ಯೂಕಲಿಪ್ಟಸ್ ಮರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ವೇಳೆ ಪತ್ತೆಯಾಗಿದೆ.
ಕಾಲಾವಧಿಯ ಸ್ಪಷ್ಟ ಉಲ್ಲೇಖ ಇಲ್ಲ
ಈ ವೀರಗಲ್ಲಿನ ಮೇಲಿರುವ ಶಾಸನವು ಹಳೆಗನ್ನಡ ಲಿಪಿಯಲ್ಲಿದ್ದು, ಅದರಲ್ಲಿ ಕಾಲಾವಧಿಯ ಸ್ಪಷ್ಟ ಉಲ್ಲೇಖ ಇಲ್ಲ. ಆದರೆ ಲಿಪಿಯ ಶೈಲಿಯನ್ನು ಆಧರಿಸಿ ಇದು ಸುಮಾರು ಕ್ರಿ.ಶ. 850ರ ಗಂಗ-ರಾಷ್ಟ್ರಕೂಟರ ಕಾಲಕ್ಕೆ ಸೇರಿದೆ ಎಂದು ತಜ್ಞರು ನಿರ್ಧರಿಸಿದ್ದಾರೆ. ಶಿಲ್ಪದಲ್ಲಿ ವೀರನು ಹುಲಿಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಯುದ್ಧದಲ್ಲಿ ವೀರಮರಣ ಹೊಂದಿದ ಬಳಿಕ ಅಪ್ಸರೆಯರು ಆತನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣವೂ ಇದೆ. ವೀರನು ಬಲಗೈಯಲ್ಲಿ ಕತ್ತಿ ಹಿಡಿದು, ಎಡಗೈಯಿಂದ ಹುಲಿಯ ಮುಂಗಾಲನ್ನು ಹಿಡಿದು ಹೋರಾಡುತ್ತಿರುವುದನ್ನು ಶಿಲ್ಪದಲ್ಲಿ ಕಾಣಬಹುದು.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್ ಸಮಸ್ಯೆ; 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ
ಶಾಸನದ ಪ್ರಕಾರ, ಈ ವೀರನ ಹೆಸರು ಶಿವಮಾರೆನಾಡಿ. ಆತ ತಣ್ಣಿಯರಟ್ಟಮ್ಮರೊಡೆಯ ಅವರ ಪುತ್ರನಾಗಿದ್ದು, ಮಾರಮ್ಮ ಎಂಬ ಮನ್ನೆನಾಡಿನ ನಾಡಗೌಡನ ಸೇವಕನಾಗಿದ್ದನು. ಕೃಷಿ ಮತ್ತು ಪಶುಸಂಗೋಪನೆ ಪ್ರಮುಖ ಜೀವನೋಪಾಯವಾಗಿದ್ದ ಆ ಕಾಲದಲ್ಲಿ ಬೆಳೆ ಮತ್ತು ಜಾನುವಾರುಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಸಂದರ್ಭದಲ್ಲಿ ಈ ವೀರನು ಪ್ರಾಣತ್ಯಾಗ ಮಾಡಿದ್ದಾನೆ ಎಂದು ಶಾಸನ ತಿಳಿಸುತ್ತದೆ.ಇತಿಹಾಸಕಾರರ ಪ್ರಕಾರ, ಇಂದಿನ ನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ ತಾಲ್ಲೂಕುಗಳು ಹಾಗೂ ಹೆಸರಘಟ್ಟ ಹೋಬಳಿಯ ಕೆಲವು ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಮನ್ನೆ ನಾಡು ಎಂದು ಕರೆಯಲಾಗುತ್ತಿತ್ತು. ಗಂಗರ ಆಡಳಿತದ ರಾಜಧಾನಿಯೂ ಮನ್ನೆ ಆಗಿತ್ತು.
ಪತ್ತೆಯಾದ ಈ ವೀರಗಲ್ಲನ್ನು ಸಮೀಪದ ದೇವಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಮುಂದಿನ ಸಂರಕ್ಷಣಾ ಕ್ರಮಗಳಿಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ಜಿ. ರಾವ್ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.