ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ವಿದೇಶಗಳಲ್ಲಿ ತೆರೆಕಾಣುತ್ತಿರುವ ಅದೇ ಆವೃತ್ತಿಯನ್ನು ಭಾರತೀಯ ಪ್ರೇಕ್ಷಕರು ವೀಕ್ಷಿಸಲು ಸಾಧ್ಯವಿಲ್ಲ. ‘ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ’ (CBFC) ಈ ಚಿತ್ರದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಿದೆ. ಸಿನಿಮಾವನ್ನು ಪರಿಶೀಲಿಸಿದ ಸೆನ್ಸಾರ್ ಮಂಡಳಿಯು ‘UA 13+’ ಪ್ರಮಾಣಪತ್ರವನ್ನು ನೀಡಿದ್ದು, 13 ವರ್ಷ ಮೇಲ್ಪಟ್ಟ ಮಕ್ಕಳು ಪೋಷಕರ ಮಾರ್ಗದರ್ಶನದೊಂದಿಗೆ ಚಿತ್ರ ವೀಕ್ಷಿಸಬಹುದು. ಆದರೆ, ಸರ್ಟಿಫಿಕೇಟ್ ನೀಡುವ ಮುನ್ನ ಚಿತ್ರದಲ್ಲಿದ್ದ 8 ಸೆಕೆಂಡ್ಗಳ ಚುಂಬನದ ದೃಶ್ಯವನ್ನು ತೆಗೆದುಹಾಕುವಂತೆ ಸೂಚಿಸಿದೆ.
ಆಕ್ಷೇಪಾರ್ಹ ಪದಗಳಿಗೂ ಕಟ್:
ಕೇವಲ ಚುಂಬನದ ದೃಶ್ಯ ಮಾತ್ರವಲ್ಲದೆ, ಸಿನಿಮಾದ ಆಡಿಯೋ ಮತ್ತು ಸಬ್ಟೈಟಲ್ಗಳಲ್ಲಿ ಬಳಕೆಯಾಗಿದ್ದ ಕೆಲವು ಆಕ್ಷೇಪಾರ್ಹ ಪದಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಮಪಕರಿಗೆ ಮಂಡಳಿ ನಿರ್ದೇಶನ ನೀಡಿತ್ತು. ನಿರ್ಮಾಪಕರು ಈ ತಿದ್ದುಪಡಿಗಳನ್ನು ಮಾಡಿದ ನಂತರವೇ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ಸಿಕ್ಕಿದೆ. ಈ ಎಲ್ಲಾ ಬದಲಾವಣೆಗಳ ನಂತರ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾದ ಒಟ್ಟು ಅವಧಿ 2 ಗಂಟೆ 24 ನಿಮಿಷಗಳು ಎಂದು ಖಚಿತಪಟ್ಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ:
ಸೆನ್ಸಾರ್ ಮಂಡಳಿಯ ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಸಿನಿಮಾ ಪ್ರಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಯಸ್ಸಿನ ಆಧಾರದ ಮೇಲೆ ಪ್ರಮಾಣಪತ್ರ ನೀಡಿದ ಮೇಲೆಯೂ ರೊಮ್ಯಾಂಟಿಕ್ ಹಾಗೂ ಕಿಸ್ಸಿಂಗ್ ದೃಶ್ಯಗಳನ್ನು ಕತ್ತರಿಸುವ ಅಗತ್ಯವೇನಿತ್ತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿಯ ಇಂಥ ನಿಲುವಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಸೆನ್ಸಾರ್ ಮಂಡಳಿಯ ದ್ವಿಮುಖ ನೀತಿಗೆ ಟೀಕೆ:
‘ರೆಡ್ಡಿಟ್’ ಬಳಕೆದಾರರೊಬ್ಬರು ಕಾಮೆಂಟ್ ಮಾಡುತ್ತಾ, ‘ಬಾಲಿವುಡ್ ಸಿನಿಮಾಗಳಲ್ಲಿ ಕೆಟ್ಟ ನೃತ್ಯ, ಹಾಡು ಹಾಗೂ ಕಾಮಪ್ರಚೋದಕ ದೃಶ್ಯಗಳಿದ್ದರೂ ಸುಲಭವಾಗಿ ಬಿಡುಗಡೆ ಮಾಡಲು ಬಿಡುತ್ತಾರೆ. ಆದರೆ ಹಾಲಿವುಡ್ ಸಿನಿಮಾಗಳು ಬಂದರೆ ಮಾತ್ರ ಸೆನ್ಸಾರ್ ಮಂಡಳಿಗೆ ನಿಯಮಗಳು ನೆನಪಾಗುತ್ತವೆ. ಇದು ಸಂಪೂರ್ಣವಾಗಿ ದ್ವಿಮುಖ ನೀತಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಸ್ಪೈಡರ್ ಮ್ಯಾನ್’ ಹೆಗಲ ಮೇಲೆ ಕೈ, ಹಾಲಿವುಡ್ ಸಿನಿಮಾಕ್ಕೆ ರಿಷಬ್ ಪ್ರಚಾರ
ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿ, ‘ನನಗೇನೂ ಆಶ್ಚರ್ಯವಾಗಿಲ್ಲ. ಕಳೆದ ವರ್ಷ ಸೂಪರ್ಮ್ಯಾನ್ ಚಿತ್ರದಲ್ಲೂ ಚುಂಬನದ ದೃಶ್ಯ ಕಟ್ ಮಾಡಿದ್ದ ಇದೇ ಸಿಬಿಎಫ್ಸಿ ಸದಸ್ಯರು, ತಮ್ಮ ಸಿದ್ಧಾಂತಕ್ಕೆ ಪೂರಕವಾದ ಹಾಗೂ ಸರ್ಕಾರದ ಪರವಾದ ಸಿನಿಮಾಗಳಿಗೆ ಯಾವುದೇ ಕಟ್ ಇಲ್ಲದೆ ಸುಲಭವಾಗಿ ಒಪ್ಪಿಗೆ ನೀಡುತ್ತಾರೆ’ ಎಂದು ಟೀಕಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.