Headlines

ಬಾಣಂತಿಯರ ಸರಣಿ ಸಾವಿನ ಘಟನೆಯಿಂದಲೂ ಕಲಿಯದ ಪಾಠ: ಆರೋಗ್ಯ ಇಲಾಖೆ ಮತ್ತೆ ಎಡವಟ್ಟು! – Kannada News | KSMSCL MD Appointment Sparks Row as Government Appoints Non IAS Officer

ಸಾಂದರ್ಭಿಕ ಚಿತ್ರImage Credit source: Karnataka Health Department

ಬೆಂಗಳೂರು, ಜುಲೈ 29: ಬಳ್ಳಾರಿಯಲ್ಲಿ (Ballari) ಬಾಣಂತಿಯರ ಸರಣಿ ಸಾವಿನ ಘಟನೆ ಬಳಿಕ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಕಾರ್ಯವೈಖರಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದ ಸರ್ಕಾರ, ಇದೀಗ ಅದೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಎಸ್ (IAS) ಅಥವಾ ಕೆಎಎಸ್ ತತ್ಸಮಾನವಲ್ಲದ ಅಧಿಕಾರಿಯನ್ನು ನೇಮಕ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ನೇಮಕಾತಿಯ ಸೂಕ್ತತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಂದರೇನು?

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಆರೋಗ್ಯ ಸಾಮಗ್ರಿಗಳ ಖರೀದಿ ಮತ್ತು ವಿತರಣೆಯ ಹೊಣೆ ಹೊತ್ತಿರುವ ಪ್ರಮುಖ ಸಂಸ್ಥೆಯಾಗಿದೆ. ಇಂತಹ ನಿಗಮದ ಮುಖ್ಯಸ್ಥರ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ತತ್ಸಮಾನವಲ್ಲದ ಅಧಿಕಾರಿಯನ್ನು ನೇಮಕ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಮುಖ ಹುದ್ದೆಗೆ ಕೆಳ ಹಂತದ ಅಧಿಕಾರಿ!

ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರ ಸ್ಥಾನಕ್ಕೆ ಜಂಟಿ ನಿರ್ದೇಶಕರ ಹುದ್ದೆಯ ಎ.ಆರ್. ರವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ನೇಮಕಾತಿ ಕುರಿತು ಹಲವು ವಲಯಗಳಲ್ಲಿ ಚರ್ಚೆ ಆರಂಭವಾಗಿದ್ದು, ಇಂತಹ ಪ್ರಮುಖ ಹುದ್ದೆಗೆ ಕೆಳ ಹಂತದ ಅಧಿಕಾರಿಯನ್ನು ನೇಮಕ ಮಾಡಿರುವುದು ಸೂಕ್ತವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಬೇರೆ ರಾಜ್ಯಗಳಲ್ಲಿ ವೈದ್ಯಕೀಯ ಸರಬರಾಜು ನಿಗಮ ಮುಖ್ಯಸ್ಥರು ಯಾರು?

ದೇಶದ ಸುಮಾರು 20 ರಾಜ್ಯಗಳಲ್ಲಿ ವೈದ್ಯಕೀಯ ಸರಬರಾಜು ನಿಗಮಗಳ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ವಿಭಿನ್ನ ರೀತಿಯ ನೇಮಕಾತಿ ಮಾಡಿರುವುದು ಟೀಕೆಗೆ ಕಾರಣವಾಗಿದೆ. ಔಷಧ, ವೈದ್ಯಕೀಯ ಉಪಕರಣಗಳು ಹಾಗೂ ಆರೋಗ್ಯ ಸಾಮಗ್ರಿಗಳ ಖರೀದಿ ಮತ್ತು ವಿತರಣೆಯ ಜವಾಬ್ದಾರಿ ಹೊಂದಿರುವ ಸಂಸ್ಥೆಯ ಆಡಳಿತದಲ್ಲಿ ಅನುಭವ ಹಾಗೂ ಆಡಳಿತಾತ್ಮಕ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ಇರಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಲೂಟಿ ಮಾಡಲು ಈ ನೇಮಕಾತಿ: ಪ್ರತಿಪಕ್ಷ ಬಿಜೆಪಿ ಆಕ್ರೋಶ

ಈ ಬೆಳವಣಿಗೆ ಕುರಿತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಲೂಟಿ ಮಾಡಲು ಹಾಗೂ ಬೊಕ್ಕಸ ತುಂಬಿಸಿಕೊಳ್ಳಲು ಇಂತಹ ನೇಮಕಾತಿ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಬಳ್ಳಾರಿ ಬಾಣಂತಿಯರ ಸರಣಿ ಸಾವಿನ ಘಟನೆ ಬಳಿಕ 2025ರಲ್ಲಿ ರಚನೆಯಾಗಿದ್ದ ತಜ್ಞರ ಸಮಿತಿಯು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮುಖ್ಯಸ್ಥರಾಗಿ ಐಎಎಸ್ ಶ್ರೇಣಿಯ ಅಧಿಕಾರಿಯೇ ಇರಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಇದೀಗ ಆ ಶಿಫಾರಸಿಗೆ ವಿರುದ್ಧವಾಗಿ ಐಎಎಸ್ ಅಥವಾ ಕೆಎಎಸ್ ಶ್ರೇಣಿಗಿಂತ ಕೆಳ ಹಂತದ ಅಧಿಕಾರಿಯನ್ನು ನೇಮಕ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಳ್ಳಾರಿ ಪ್ರಕರಣ ಮಾಸುವ ಮುನ್ನವೇ ಪಕ್ಕದ ವಿಜಯನಗರದಲ್ಲೂ ಬಾಣಂತಿ ಸಾವು

ಒಟ್ಟಿನಲ್ಲಿ, ಬಳ್ಳಾರಿ ದುರಂತದ ನಂತರ ಸುಧಾರಣೆಯ ಭರವಸೆ ನೀಡಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಆಡಳಿತದಲ್ಲಿ ನಡೆದಿರುವ ಈ ಹೊಸ ನೇಮಕಾತಿ ಮತ್ತೆ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದ್ದು, ಸರ್ಕಾರದ ನಿರ್ಧಾರದ ಬಗ್ಗೆ ವಿವಿಧ ವಲಯಗಳ ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *