ಇತ್ತೀಚೆಗೆ ನಡೆದ ಜೆನ್ ಜಿ (Gen Z) ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅವರ ಭಾಷಾ ಶೈಲಿಯನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ (Kangana Ranaut) ಹೇಳಿಕೆಗೆ ಬಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ವಿಶಾಲ್ ದದ್ಲಾನಿ (Vishal Dadlani) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ಯುವಜನರ ಪರವಾಗಿ ಧ್ವನಿ ಎತ್ತಿರುವ ವಿಶಾಲ್, ವಿದ್ಯಾರ್ಥಿಗಳ ಮೇಲಾದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಂಗನಾ ರಣಾವತ್ ಹೇಳಿದ್ದೇನು?
ವಿದ್ಯಾರ್ಥಿ ಪ್ರತಿಭಟನಾಕಾರರು ಬಳಸುತ್ತಿರುವ ಭಾಷೆ ಮತ್ತು ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋಗಳ ಕುರಿತು ಕಂಗನಾ ರಣಾವತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಟು ಪದಗಳಿಂದ ವಾಗ್ದಾಳಿ ನಡೆಸಿದ್ದರು. ‘ನನ್ನ ಜೀವನದಲ್ಲೇ ಇಷ್ಟೊಂದು ಅಸಹ್ಯಕರ ವಿಡಿಯೋಗಳನ್ನು ನೋಡಿರಲಿಲ್ಲ. ಜೆನ್ ಜಿ ಪ್ರತಿಭಟನೆಯ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳು ವಾಂತಿ ಬರಿಸುವಂತಿವೆ. ಅವರು ಮಾತನಾಡುತ್ತಿರುವ ಶೈಲಿ ಹಾಗೂ ಬಳಸುತ್ತಿರುವ ಭಾಷೆ ತೀರಾ ಕೆಳಮಟ್ಟದ್ದಾಗಿದೆ’ ಎಂದು ಬರೆದುಕೊಂಡಿದ್ದರು.
ವಿಶಾಲ್ ದದ್ಲಾನಿ ಖಾರವಾದ ಪ್ರತಿಕ್ರಿಯೆ:
ಕಂಗನಾ ಅವರ ಈ ಹೇಳಿಕೆಗಳ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವಿಶಾಲ್ ದದ್ಲಾನಿ ಅವರು, ವಿದ್ಯಾರ್ಥಿಗಳ ಮೇಲಾದ ಹಲ್ಲೆಯನ್ನು ಪ್ರಶ್ನಿಸಿದ್ದಾರೆ. ‘ಕೆಟ್ಟ ಭಾಷೆ ಎನ್ನುತ್ತೀರಾ? ನೀವು ಬೀದಿಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದೀರಿ. ಅವರ ಮೇಲೆ ಕಲ್ಲು ತೂರಿ, ಲಾಠಿ ಪ್ರಹಾರ, ಅಶ್ರು ವಾಯು ಹಾಗೂ ಪೆಲೆಟ್ ಗನ್ ಪ್ರಯೋಗ ಮಾಡಿದ್ದೀರಿ. ನಿಮ್ಮ ಬಾಡಿಗೆ ಗೂಂಡಾಗಳು ಇಂದಿಗೂ ಅವರನ್ನು ಬೆದರಿಸುತ್ತಿದ್ದಾರೆ. ಹೀಗಿರುವಾಗ ಅವರು ಬೈದಿರುವುದರಲ್ಲಿ ತಪ್ಪೇನಿದೆ?’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್
ಈ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ, ‘ಯುವ ಪ್ರತಿಭಟನಾಕಾರರ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಹಣ ನೀಡಿ ಪೇಯ್ಡ್ ಅಪಪ್ರಚಾರ ನಡೆಸಲಾಗುತ್ತಿದೆ. ಇದು ನಿಮ್ಮ ಅಸಹಾಯಕತೆಯನ್ನು ತೋರಿಸುತ್ತದೆ’ ಎಂದು ವಿಶಾಲ್ ದದ್ಲಾನಿ ಅವರು ಲೇವಡಿ ಮಾಡಿದ್ದಾರೆ. ವಿದ್ಯಾರ್ಥಿಗಳು ಬಳಸಿದ ಭಾಷೆಯನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ, ಅವರ ಮೇಲಾದ ದೌರ್ಜನ್ಯಗಳ ಕುರಿತು ಸಮಾಜ ಗಮನಹರಿಸಬೇಕು ಎಂದು ವಿಶಾಲ್ ಹೇಳಿದ್ದು, ಸದ್ಯ ಈ ವಿಷಯವು ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.