‘ಸ್ಪೈಡರ್ ಮ್ಯಾನ್’ ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಭಾರತದಲ್ಲಿ ಈ ಸಿನಿಮಾ ನಾಳೆ (ಜುಲೈ 30) ಬಿಡುಗಡೆ ಆಗಲಿದೆ. ಇತರೆ ರಾಷ್ಟ್ರಗಳಲ್ಲಿ ಜುಲೈ 31ಕ್ಕೆ ರಿಲೀಸ್ ಆಗಲಿದೆ. ‘ಸ್ಪೈಡರ್ ಮ್ಯಾನ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಭಾರತದ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿದೆ. ಕೆಲ ಭಾರತೀಯ ಸೂಪರ್ ಸ್ಟಾರ್ ನಟರ ಸಿನಿಮಾಗಳು ಸಹ ಮಾಡದಷ್ಟು ಮುಂಗಡ ಕಲೆಕ್ಷನ್ ಅನ್ನು ಈ ಸಿನಿಮಾ ಈಗಾಗಲೇ ಮಾಡಿದೆ. ಮೊದಲ ದಿನದ ಗಳಿಕೆಯಂತೂ ದಾಖಲೆ ಬರೆಯುವುದು ಖಾತ್ರಿ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ವಿಶ್ಲೇಷಕರು.
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಅಡ್ವಾನ್ಸ್ ಬುಕಿಂಗ್ ನಿಂದಲೇ ಈಗಾಗಲೇ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ 35 ಕೋಟಿ ಗಳಿಕೆ ಆಗಿದ್ದು, ಸಿನಿಮಾ ಬಿಡುಗಡೆಗೆ ವೇಳೆಗೆ ಈ ಮೊತ್ತ ಇನ್ನೂ ಸ್ವಲ್ಪ ಹೆಚ್ಚಾಗುವುದು ಖಾತ್ರಿ. ಇನ್ನು ಈ ಸಿನಿಮಾ ರಿಲೀಸ್ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುವುದು ಖಾತ್ರಿ ಎನ್ನಲಾಗಿದೆ.
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಮೊದಲ ದಿನ ಭಾರತದಲ್ಲಿ ಸುಮಾರು 50 ರಿಂದ 60 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಈಗಾಗಲೇ ಅಂದಾಜು ಮಾಡಿದ್ದಾರೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅದ್ಧೂರಿಯಾಗಿ ಆಗಿದ್ದು, ಅದರ ಆಧಾರದ ಮೇಲೆ ಸಿನಿಮಾದ ಮೊದಲ ದಿನದ ಕಲೆಕ್ಷನ್ 50 ರಿಂದ 60 ಕೋಟಿ ಆಗಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆ ಆದ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಸಹ ಮೊದಲ ದಿನ ಭಾರತದಲ್ಲಿ ಸುಮಾರು 41 ಕೋಟಿ ಗಳಿಕೆ ಮಾಡಿತ್ತು. ಅಲ್ಲಿಗೆ ‘ಸ್ಪೈಡರ್ ಮ್ಯಾನ್’ ಸಿನಿಮಾ ಅದಕ್ಕೂ ಹೆಚ್ಚಿನ ಮೊತ್ತ ಗಳಿಕೆ ಮಾಡುವ ಸಾಧ್ಯತೆ ಇದೆ.
ಈಗ ಬಿಡುಗಡೆ ಆಗುತ್ತಿರುವ ‘ಸ್ಪೈಡರ್ ಮ್ಯಾನ್’ ಸಿನಿಮಾ ಈ ಸರಣಿಯ ಒಂಬತ್ತನೇ ಸಿನಿಮಾ ಆಗಿದೆ. ಮೊದಲ ಮೂರು ಸಿನಿಮಾಗಳಲ್ಲಿ ಟೋಬಿ ಮೆಗ್ವೇಯರ್ ‘ಸ್ಪೈಡರ್ ಮ್ಯಾನ್’ ಆಗಿ ನಟಿಸಿದ್ದರೆ ಎರಡರಲ್ಲಿ ಆಂಡ್ರ್ಯೂ ಗ್ಯಾರಿಫೀಲ್ಡ್ ಆ ಬಳಿಕ ಮೂರರಲ್ಲಿ ಟಾಮ್ ಹಾಲೆಂಡ್ ನಟಿಸಿದ್ದರು. ಈಗ ಬಿಡುಗಡೆ ಆಗುತ್ತಿರುವುದು ಟಾಮ್ ಹಾಲೆಂಡ್ ನಟಿಸುತ್ತಿರುವ ನಾಲ್ಕನೇ ‘ಸ್ಪೈಡರ್ ಮ್ಯಾನ್’ ಸಿನಿಮಾ ಆಗಿದೆ. ಈಗ ಬಿಡುಗಡೆ ಆಗಿರುವ ಟ್ರೈಲರ್ ಪ್ರಕಾರ, ‘ಸ್ಪೈಡರ್ ಮ್ಯಾನ್’ ಅನ್ನು ಜಗತ್ತು ಮರೆತು ಹೋಗಿದೆ. ಪೀಟರ್ ಪಾರ್ಕರ್ ಅನ್ನು ಸಹ. ಈಗ ಸ್ಪೈಡರ್ ಮ್ಯಾನ್ಗೆ ಗೆಳೆಯರಿಲ್ಲ, ಗರ್ಲ್ಫ್ರೆಂಡ್ ಸಹ ಇಲ್ಲ. ಆದರೆ ಅವೇಂಜರ್ಸ್ ಗುಂಪಿನಲ್ಲಿ ಜೊತೆಗೇ ಇರುವ ಹಲ್ಕ್ ಸೇರಿದಂತೆ ಹಲವು ವೈರಿಗಳು ಹುಟ್ಟಿಕೊಂಡಿದ್ದಾರೆ. ಈ ಬಾರಿ ದುಷ್ಟರನ್ನು ಸ್ಪೈಡರ್ ಮ್ಯಾನ್ ಹೇಗೆ ಸೆದೆ ಬಡಿಯುತ್ತಾನೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ